Index   ವಚನ - 200    Search  
 
ಕಕ್ಷದಲ್ಲಿ ಅಂಗವ ಧರಿಸಿದ ಮತ್ತೆ ಕುಕ್ಷಿಯ ವರ್ತನೆ ಬಿಡಬೇಕು. ಕರಸ್ಥಲದಲ್ಲಿ ಲಿಂಗವ ಧರಿಸಿದ ಮತ್ತೆ ಪರದ್ರವ್ಯಕ್ಕೆ ಕೈಯಾನದಿರಬೇಕು. ಉತ್ತಮಾಂಗದಲ್ಲಿ ಲಿಂಗವ ಧರಿಸಿದ ಮತ್ತೆ ಮರ್ತ್ಯರುಗಳಿಗೆ ನೆಟ್ಟನೆ ಇರಬೇಕು. ಅಮಳೋಕ್ಯದಲ್ಲಿ ಲಿಂಗವ ಧರಿಸಿದ ಮತ್ತೆ ತುತ್ತಿನಿಚ್ಫೆಯ ಬಿಡಬೇಕು. ಉರಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಪರಸ್ತ್ರೀಯರ ಸಂಗವ ಬಿಡಬೇಕು, ಮುಖಸೆಜ್ಜೆಯಲ್ಲಿ ಲಿಂಗವ ಧರಿಸಿದ ಮತ್ತೆ ಸಕಲಗುಣವನರಿಯಬೇಕು. ಇಂತಿವನರಿಯದೆ ಸತ್ಕ್ರಿಯೆಯಲ್ಲಿ ನಡೆವ ನಡೆ ಎಂತುಟಯ್ಯಾ ? ಭಕ್ತನಾದ ಮತ್ತೆ ಮರ್ತ್ಯರ ಸಂಗ ಬಿಡಬೇಕು. ಮಾಹೇಶ್ವರನಾದ ಮತ್ತೆ ಮಹಾವಿಚಾರವ ತಿಳಿಯಬೇಕು. ಪ್ರಸಾದಿಯಾದ ಮತ್ತೆ ಪರದೂಷಣೆಯ ಕೇಳದಿರಬೇಕು. ಪ್ರಾಣಲಿಂಗಿಯಾದ ಮತ್ತೆ ಜಾಗ್ರ ಸ್ವಪ್ನಸುಷುಪ್ತಿಯಲ್ಲಿ ಮತ್ತತ್ವವಿಲ್ಲದಿರಬೇಕು. ಶರಣನಾದ ಮತ್ತೆ ಸರ್ವಾವಧಾನಿಯಾಗಿರಬೇಕು. ಐಕ್ಯನಾದ ಮತ್ತೆ ಸತ್ತುಚಿತ್ತಾನಂದವೆಂಬ ತ್ರಿವಿಧದ ಗೊತ್ತು ಮುಟ್ಟದಿರಬೇಕು. ಹೀಂಗಲ್ಲದೆ ಷಟ್‍ಸ್ಥಲಕ್ಕೆ ಸಲ್ಲ, ಪರಬ್ರಹ್ಮಕ್ಕೆ ನಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪವಾದ ಶರಣ.