Index   ವಚನ - 232    Search  
 
ಕಾಣಬಾರದ ಲಿಂಗವ ಕಾಬ ಪರಿಯಿನ್ನೆಂತೊ ? ಕುರುಹಿಲ್ಲದ ಜ್ಞಾನವ ಕುರುಹಿಟ್ಟರಿವ ಪರಿಯಿನ್ನೆಂತೊ ? ನೋಟಕ್ಕೆ ಬಾರದ ರೂಪ, ಕೂಟದಲ್ಲಿ ಸುಖವನರಿವ ಪರಿಯಿನ್ನೆಂತೊ ? ಅರಿದೆಹೆನೆಂಬುದೇನು, ಇದಿರಿಟ್ಟರಿಸಿಕೊಂಡಿಹೆನೆಂಬುದೇನು ? ಅರಿವಿಂಗೂ ಮರವೆಗೂ ಒಡಲಾಯಿತ್ತೆ ಲಿಂಗವು ? ಘಟದೊಳಗಣ ಜ್ಯೋತಿ ಮಠಕ್ಕೆ ಭಿನ್ನವುಂಟೆ ? ಘಟಕ್ಕೆ ಮಠ ಬೇರೆಯುಂಟೆ ? ಅರಿಯಲಿಲ್ಲವಾಗಿ ಮರೆಯಲಿಲ್ಲ, ಮರೆದರಿಯಲಿಲ್ಲವಾಗಿ, ತೆರಹಿಲ್ಲದ ಮತ್ತೆ ಕುರುಹಿಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.