Index   ವಚನ - 237    Search  
 
ಕಾಯಗುಣವಿಡಿದು ಮಾಡುವನ್ನಕ್ಕ ಸತ್ಯಸದ್ಭಕ್ತನಲ್ಲ. ಜೀವಗುಣವಿಡಿದು ತಿರುಗುವನ್ನಕ್ಕ ಪರಶಿವರೂಪನಲ್ಲ. ಕ್ರೀಯನರಿದು ಆಚಾರದಲ್ಲಿ ನಿಂದು, ರಿಣಾತೂರ್ಯ ಮುಕ್ತ್ಯಾತೂರ್ಯ ಸ್ವ ಇಚ್ಫಾತೂರ್ಯವೆಂಬ ಮೂರುಮಾಟವ ಕಂಡು, ಭಕ್ತಿ ಜ್ಞಾನ ವೈರಾಗ್ಯವೆಂಬ ತ್ರಿವಿಧ ನಿಶ್ಚಯವನರಿದು, ಸುಮನ ವಚನ ಕಾಯ ತ್ರಿಕರಣ ಶುದ್ಧಾತ್ಮನಾಗಿ, ಆಪ್ಯಾಯನದ ಅನುವನರಿದು, ಸಮಯದಲ್ಲಿ ಮಾನ್ಯರ ಇರವನರಿತು ಕೂಡುವಲ್ಲಿ, ಇಂತೀ ಭಾವ ಸದ್ಭಕ್ತ ಸ್ಥಲ. ಹೆಣ್ಣು ಹೊನ್ನು ಮಣ್ಣಿನಲ್ಲಿ, ಸ್ತುತಿ ನಿಂದ್ಯಾದಿಗಳಲ್ಲಿ, ತಥ್ಯ ಮಿಥ್ಯಂಗಳಲ್ಲಿ ವಿರಾಗನಾಗಿ, ಸುಖದುಃಖಗಳಲ್ಲಿ ಸರಿಗಂಡು ನಿಃಕಳಂಕನಾಗಿ ಚರಿಸಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನನೆಂಬೆನು.