Index   ವಚನ - 248    Search  
 
ಕಾಯ ಹಸಿದು ಓಗರವ ಬೇಡುವಾಗ, ಲಿಂಗಕ್ಕೆ ಅರ್ಪಿತವೆಲ್ಲಿಯಿತ್ತೊ ? ಮನ ತನುವ ಬಿಟ್ಟು ಸರ್ವವಿಕಾರದಲ್ಲಿ ಭ್ರಮಿಸುವಾಗ, ಸಾವಧಾನಿಗಳೆಂತಾದಿರೊ ? ಸ್ಥೂಲದಲ್ಲಿ ಹಿಡಿದು, ಸೂಕ್ಷ್ಮದಲ್ಲಿ ಮರೆದು, ಕಾರಣದಲ್ಲಿ ಏನೆಂದರಿಯದೆ, ಜಗದ ಉತ್ಪತ್ಯಕ್ಕೆ ಒಳಗಾಹವರ ಪ್ರಾಣಲಿಂಗಿಗಳೆಂಬೆನೆ ? ಎನ್ನೆನು. ಇಂತಿವರೆಲ್ಲರೂ ಡಾಗಿನ ಪಶುಗಳು, ವೇಷಧಾರಿಗಳು, ಶಾಸ್ತ್ರದ ಸಂತೆಯವರು, ಪುರಾಣದ ಪುಂಡರು, ತರ್ಕದ ಮರ್ಕಟರು, ಭವಸಾಗರದ ಬಾಲಕರು. ತತ್ವವನರಿಯದ ಮತ್ತರು. ಇಂತಿವರು ಕೆಟ್ಟ ಕೇಡ ನೋಡಿ ಗುರುವಿನ ಕೊರಳ ಕೊಯ್ದು, ಲಿಂಗದ ತಲೆಯೊಡೆಯಲಿಕ್ಕಿ, ಜಂಗಮದ ಸಂದ ಮುರಿದೆ. ದ್ವಂದ್ವವ ಹಿಂಗಿದೆ, ಸಂದನಳಿದೆ, ಸದಮಲಾನಂದ ಹಿಂಗಿದೆ. ಹೊಂದದ ಬಟ್ಟೆಯಲ್ಲಿ ಸಂದೆನಯ್ಯಾ, ಮಹಾದಾನಿ ನಿಃಕಳಂಕ ಮಲ್ಲಿಕಾರ್ಜುನಾ.