Index   ವಚನ - 276    Search  
 
ಕೆಚ್ಚಲಿನ ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ. ಬೆಂಕಿಯೊಳಗಣ ಬೇಗೆಯ ಬಲ್ಲಡೆ ಬಲ್ಲರೆಂಬೆ. ವಾಯುವಿನೊಳಗಿರ್ಪ ಸಂಚಾರವ ಬಲ್ಲಡೆ ಬಲ್ಲರೆಂಬೆ. ಬೀಜದೊಳಗಿರ್ಪ ರಸಾಂಕುರವ ಬಲ್ಲಡೆ ಬಲ್ಲರೆಂಬೆ. ಕಾಯದೊಳಗಿರ್ಪ ಪ್ರಾಣನ ನೆಲೆಯ ಬಲ್ಲಡೆ ಬಲ್ಲರೆಂಬೆ. ಚಂದನದೊಳಗಿಪ್ಪ ಗಂಧವ ಬಂಧಿಸಿ ಹಿಡಿಯಬಲ್ಲಡೆ. ಲಿಂಗವಿಪ್ಪೆಡೆಯ ಬಲ್ಲರೆಂಬೆ. ಶಿಲೆಯೊಳಗಿಪ್ಪ ಕುಲಹೀನನ ಬೆಳಗಿ ತೋರುವ ಆಮಲಿನರ ಮುಖವ ಕಂಡು ಮತ್ತೆ ದಿಂಗುವಿಡಿಯಲೇಕೊ ? ದಿಂಗ ವಿಡಿದು ಭಂಡರಹ ಲಂಡರಿಗೇಕೆ ಲಿಂಗದ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ ?