Index   ವಚನ - 279    Search  
 
ಕೈಯಲ್ಲಿ ಕುರುಹ ಹಿಡಿದು, ಕಣ್ಣಿನಲ್ಲಿ ನೋಡಿ, ಆತ್ಮದಲ್ಲಿ ಅರಿದು, ತನ್ನ ತಾನೇ ತಿಳಿದು, ಕೈಯಲ್ಲಿದ್ದುದೇನು, ಕಣ್ಣಿನಲ್ಲಿ ನೋಡಿದುದೇನು, ಆತ್ಮನಿಂದ ಅರಿದುದೇನು, ಇಂತೀ ತ್ರಿವಿಧಗುಣವ ತಿಳಿಯಬೇಕಣ್ಣಾ. ಕೈಯಲ್ಲಿದ್ದುದು ಕಡದ ಲಿಂಗವೋ ? ಕಣ್ಣಿನಲ್ಲಿ ನೋಡಿದುದು ಬಣ್ಣದ ಲಿಂಗವೋ ? ಆತ್ಮನಿಂದ ಅರಿದುದು ಬಯಲ ಲಿಂಗವೋ ? ಕೈಗೂ ಕಣ್ಣಿಗೂ ಮನಕ್ಕೂ ಭಿನ್ನವಾಯಿತ್ತು. ಲಿಂಗಪ್ರಾಣಿ, ಪ್ರಾಣಲಿಂಗಿಗಳ ಇನ್ನಾರನೂ ಕಾಣೆ. ಭಾವಿಸಲಿಲ್ಲ, ಭ್ರಮೆಗೊಳಗಾಯಿತ್ತು. ಆದಿಯ ಶರಣರೆಲ್ಲಾ ಹೋದರಲ್ಲ ಹೊಲಬುಗೆಟ್ಟು. ನಾದಕ್ಕೊಳಗಾಯಿತ್ತು, ಆತ್ಮನ ಕಳೆಯನೈದಿದವರಿನ್ನಾರನೂ ಕಾಣೆ. ಕಳಾತೀತ ಪರಂಜ್ಯೋತಿ ಪ್ರಕಾಶ ನೀನೇ, ನಿಃಕಳಂಕ ಮಲ್ಲಿಕಾರ್ಜುನಾ.