Index   ವಚನ - 397    Search  
 
ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ. ತಾವು ವ್ರತಿಗಳೆಂದು ಇದಿರಿಂಗೆ ಹೇಳದಿಹುದೆ ವ್ರತ. ಗುರುಲಿಂಗಜಂಗಮವ ದೂಷಿಸದಿಹುದೆ ವ್ರತ. ಸಹಪಂಕ್ತಿಯಲ್ಲಿ ವಿಶೇಷವ ಕೊಳದಿಪ್ಪುದೆ ವ್ರತ. ಇಂತಪ್ಪ ವ್ರತಕ್ಕೆ ನಮೋ ನಮೋ ಎಂಬೆ. ಇಂತಲ್ಲದೆ ಜಗವ ಸಿಕ್ಕಿಸುವ ಬಹುಮುಖಿಗಳಿಗೆಲ್ಲಿಯದೊ ಮುಕ್ತಿ ? ಮಾತಿನಲ್ಲಿ ಭಕ್ತಿ, ಮನದಲ್ಲಿ ಕತ್ತರಿ, ಭಕ್ತಿಯಲ್ಲಿ ಬಲೆ, ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ ಭಕ್ತಿಶೀಲ ? ಇಂತಿವ ಬಲ್ಲೆನಾಗಿ ಭಕ್ತಿ ನನಗಿಲ್ಲ. ಇನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ.