Index   ವಚನ - 421    Search  
 
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗರ್ಭೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಭೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.