Index   ವಚನ - 443    Search  
 
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.