Index   ವಚನ - 442    Search  
 
ನಾಲ್ಕು ಯುಗವು ಕೂಡಿ ಇಪ್ಪತ್ತೊಂದು ವೇಳೆ ತಿರುಗಿದಡೆ, ಇಂದ್ರಂಗೆ ಮರಣ, ಬ್ರಹ್ಮಂಗೊಂದು ದಿನ. ಅಂಥಾ ಬ್ರಹ್ಮರು ಸಹಸ್ರ ಕೂಡಿದಡೆ, ವಿಷ್ಣುವಿಂಗೆ ಪರಮಾಯು. ಅಂಥಾ ವಿಷ್ಣು ಕೋಟಿ ಕೂಡಿದಡೆ ರುದ್ರಂಗೊಂದು ಜಾವ. ಅಂಥಾ ರುದ್ರರು ಏಕದಶ ಕೋಟಿ ಕೂಡಿದಡೆ, ಈಶ್ವರಂಗೆ ಎರಡು ಜಾವ. ಅಂಥಾ ಈಶ್ವರರು ದ್ವಾದಶರು ಕೂಡಿದಡೆ, ಸದಾಶಿವಂಗೊಂದು ಜಾವ. ಅಂಥಾ ಸದಾಶಿವರು ಒಂದುಕೋಟಿ ಕೂಡಿದಡೆ, ಮಹಾಪ್ರಳಯವಹುದು. ಅಂಥಾ ಪ್ರಳಯ ಹದಿನೆಂಟು ಕೂಡಿದಡೆ, ಮಹಾ ಅಂಧಕಾರವಹುದು. ಅಂಥಾ ಅಂಧಕಾರ ಸಂದಿಲ್ಲದೆ ತಿರುಗುವಲ್ಲಿ, ಬಯಲು ಬರಿದಹುದು. ಅಲ್ಲಿಂದಾಚೆ ನೀವೆ ಬಲ್ಲಿರಿ, ನಾನರಿಯೆ. ಸೊಲ್ಲಿಂಗತೀತನಪ್ರಮಾಣನಗೋಚರ ಘನವು, ನಿಃಕಳಂಕ ಮಲ್ಲಿಕಾರ್ಜುನ.