Index   ವಚನ - 499    Search  
 
ಪೃಥ್ವಿಯ ಅಂಗ ಭಕ್ತನಾದಲ್ಲಿ, ಸರ್ವಸಮಾಧಾನಿಯಾಗಿ ಭೂತಹಿತನಾಗಿರಬೇಕು. ಅಪ್ಪುವಿನ ಅಂಗ ಮಾಹೇಶ್ವರನಾದಲ್ಲಿ, ಮಲ ನಿರ್ಮಲವೆನ್ನದೆ ಇರಬೇಕು. ತೇಜದ ಅಂಗ ಪ್ರಸಾದಿಯಾದಲ್ಲಿ, ಜಿಗುಪ್ಸೆ ಚಿಕಿತ್ಸೆಯನರಿಯದಿರಬೇಕು. ವಾಯುವಿನ ಅಂಗ ಪ್ರಾಣಲಿಂಗಿಯಾದಲ್ಲಿ, ಸುಗುಣ ದುರ್ಗುಣಂಗಳನರಿಯದಿರಬೇಕು. ಆಕಾಶದ ಅಂಗ ಶರಣನಾದಲ್ಲಿ, ಲೇಖ ಅಲೇಖಂಗಳನರಿಯದಿರಬೇಕು. ಮಹದಾಕಾಶದಂತೆ ಐಕ್ಯನಾದಲ್ಲಿ, ಸುರಾಳ ನಿರಾಳಂಗಳನರಿಯದಿರಬೇಕು. ಇಂತೀ ಷಟ್ಸ್ಥಲವ ಒಂದ ನೆಮ್ಮಿ, ಒಂದ ವೇಧಿಸಬೇಕು. ವೇಧಿಸುವನ್ನಕ್ಕ ವಿರಳನಾಗಿ, ವೇಧಿಸಿ ನಿಂದಲ್ಲಿ ಅವಿರಳನಾಗಿ, ತತ್ವಮಸಿಯೆಂಬ ಭಿತ್ತಿಯ ಮೆಟ್ಟದೆ, ನಿಶ್ಚಿಂತನಾಗಿರಬೇಕು, ನಿಃಕಳಂಕ ಮಲ್ಲಿಕಾರ್ಜುನಾ.