Index   ವಚನ - 561    Search  
 
ಭಕ್ತನ ತ್ರಿವಿಧ ಲಿಂಗಭೇದ, ಚಿಪ್ಪಿನ ಮುತ್ತಿನ ಅಪ್ಪುವಿನಂತೆ ಇದ್ದಿತ್ತು. ಆ ತ್ರಿವಿಧದ ಆದಿಯನರಿದಲ್ಲಿ ಭಕ್ತಸ್ಥಲ ಸಂಪೂರ್ಣ. ಮಾಹೇಶ್ವರನ ತ್ರಿವಿಧಲಿಂಗ ಭೇದ, ವಾರಿವಾಯುವಿನ ಸಂಗದ ಕಲ್ಲಿನ ಬೆಗಡದಂತೆ ಇದ್ದಿತ್ತು. ಪ್ರಸಾದಿಯ ತ್ರಿವಿಧಲಿಂಗದ ಭೇದ, ಉರಿಯ ತುದಿಯ ಮೇಲೆ ಎರೆದೆಣ್ಣೆಯ ಕೊಂಡು ಉರಿವ ಸರದಂತೆ ಇದ್ದಿತ್ತು. ಪ್ರಾಣಲಿಂಗಿಯ ತ್ರಿವಿಧಲಿಂಗದ ಭೇದ, ಹರಿವ ಅಪ್ಪುವಿನಲ್ಲಿ ಬರೆದ ಚಿತ್ತಾರದಂತೆ ಇದ್ದಿತ್ತು. ಶರಣನ ತ್ರಿವಿಧಲಿಂಗದ ಭೇದ, ವಜ್ರದ ಬೆಳಗಿನ ಕಳೆಯ ಹೊಳಹಿನಂತೆ ಇದ್ದಿತ್ತು. ಐಕ್ಯನ ತ್ರಿವಿಧವಡಗಿದ ಭಾವ, ಈ ಪೂರ್ವದ ಐದನವಗವಿಸಿ ಸ್ವಯವಾದುದು ಐಕ್ಯಾನುಭಾವ. ಇಂತೀ ಸ್ಥಲವನೆಯ್ದಿ, ನಿಃಸ್ಥಲವಾದಲ್ಲಿ ನಿಃಕಳಂಕನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.