Index   ವಚನ - 562    Search  
 
ಭಕ್ತನ ಭಕ್ತ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯವೆಂಬಲ್ಲಿ ದೃಷ್ಟವಾವುದು ಹೇಳಿರಣ್ಣಾ? ಘಟ ಬಿದ್ದಲ್ಲಿ ಆತ್ಮನೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಭಕ್ತನ ಭಕ್ತಸ್ಥಲ. ಕೆಚ್ಚಲ ಕೊಯಿದು ಹಿಕ್ಕಿದಲ್ಲಿ ಅಮೃತವಿಪ್ಪೆಡೆಯ ಬಲ್ಲಡೆ, ಮಹೇಶ್ವರನ ಮಾಹೇಶ್ವರಸ್ಥಲ. ಇಂಗಳ ಕೆಡಿಸಿ ನಂದಿದಲ್ಲಿ ಆ ವಹ್ನಿಯ ಅಂಗವೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಸಾದಿಯ ಪ್ರಸಾದಿಸ್ಥಲ. ರತ್ನದ ಶಿಲೆ ಒಡೆದು ಪುಡಿಯಾದಲ್ಲಿ ರತಿಯೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ವಾಸನೆಯ ಕುಸುಮವ ಹೊಸೆದು ವಾಸನೆ ಹೋಗಿ, ಆ ಸುವಾಸನೆ ಅಡಗಿತ್ತೆಂಬುದನರಿದಲ್ಲಿ, ಶರಣನ ಶರಣಸ್ಥಲ. ಅನಲ ಆಹುತಿಗೊಂಡು ಬೇವಲ್ಲಿ ಆ ಭಾವವ ಭಾವಿಸಬಲ್ಲಡೆ, ಐಕ್ಯನ ಐಕ್ಯಸ್ಥಲ. ಇಂತೀ ಆರು ಸ್ಥಲದ ಭೇದವನರಿತು, ಮೂರು ಆರಾದ ಉಭಯವ ಕಂಡು, ಇಂತೀ ಆರರೊಳಗೆ ಆರಾದ ಭೇದವ ಭಾವಿಸಿ ತಿಳಿದು, ಮುಕುರದೊಳಗಣ ಬಿಂಬವ ಪ್ರತಿಬಿಂಬಿಸಿ ಕಾಬುದು, ಒಂದೋ, ಎರಡೋ ? ಎಂಬುದ ತಿಳಿದಲ್ಲಿ, ಸರ್ವಸ್ಥಲ ಸಂಪೂರ್ಣ. ಆತ ಸರ್ವಾಂಗಲಿಂಗಿ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.