Index   ವಚನ - 661    Search  
 
ಯುಗ ಹದಿನೆಂಟು ಸಹಸ್ರ ಕೂಡೆ, ಬ್ರಹ್ಮಂಗೆ ಪರಮಾಯು. ಇಂತಾ ನವಬ್ರಹ್ಮರು ಸಹಸ್ರ ಕೂಡೆ, ವಿಷ್ಣುವಿಂಗೆ ಪರಮಾಯು. ಇಂತಾ ವಿಷ್ಣುವಿನ ಸಹಸ್ರ ಕೂಡೆ, ರುದ್ರಂಗೆ ಒಂದು ಜಾವ. ಇಂತಾ ರುದ್ರರು ಏಕಾದಶ ಕೂಡೆ, ಈಶ್ವರಂಗೆ ಎರಡು ಜಾವ. ಇಂತಾ ಈಶ್ವರರು ದ್ವಾದಶ ಕೂಡೆ, ಸದಾಶಿವಂಗೆ ಮೂರು ಜಾವ. ಇಂತಾ ಸದಾಶಿವರು ಶತಸಹಸ್ರ ಕೂಡೆ, ಮಹಾಪ್ರಳಯವಾಯಿತ್ತು. ಇಂತಾ ಮಹಾಪ್ರಳಯ ಹದಿನೆಂಟು ಕೂಡೆ, ಮಹಾಂಧಕಾರ ಸಂದಿತ್ತು. ಇಂತಾ ಮಹಾಂಧಕಾರ ಸಂದಿಲ್ಲದೆ ತಿರುಗುವಲ್ಲಿ, ಬಯಲು ಬರಿಕೆಯ್ಯಿತ್ತು. ಅಲ್ಲಿಂದಾಚೆ ನೀವೆ ಬಲ್ಲಿರಿ, ನಾನರಿಯೆನಯ್ಯಾ. ಸೊಲ್ಲಿಗತೀತನ ಕಲ್ಲಿಲಿರ್ದಹೆನೆಂಬರಯ್ಯಾ. ನಂಬಿಗೆ ಅಂಜಿ ಹಿಂದುಮುಂದಾದೆ, ಸಂದೇಹಿ ನಾನಯ್ಯಾ. ಎಲ್ಲಿ ಭಾವಿಸಿದಡಲ್ಲಿ ವಲ್ಲಭ ನೀನಾಗಿರ್ಪೆ, ಎನ್ನ ನಲ್ಲನೆ, ನಿಃಕಳಂಕ ಮಲ್ಲಿಕಾರ್ಜುನಾ.