Index   ವಚನ - 668    Search  
 
ರುದ್ರತತ್ವ ಲಿಂಗಮೂರ್ತಿಯಾಗಿ, ಈಶ್ವರತತ್ವ ಶರಣಮೂರ್ತಿಯಾಗಿ, ಸದಾಶಿವತತ್ವ ಐಕ್ಯಕೂಟಸ್ಥವಾಗಿ, ನಾಮರೂಪ ಭಾವವಳಿದಲ್ಲಿ, ಪರಶಿವಮೂರ್ತಿ ಪರಾಪರದೊಳಗಾಯಿತ್ತು. ಅದು ಅವರೋಹಾರೋಹವಾದಲ್ಲಿ, ಬಸವಣ್ಣ ಚೆನ್ನಬಸವಣ್ಣನೆಂದು ಒಂದು ಮೂರಾಗಿ, ಮೂರು ಆರಾಗಿ, ಆರು ಮಿಶ್ರವಾಗಿ, ನೂರೊಂದರಲ್ಲಿ ತೋರಿಹ ಸ್ಥಲ ಕುಳಂಗಳೆಲ್ಲ ಸುವರ್ಣದ ಸಾರದಂತೆ ಉರಿಗೆ ಕರಗಿ, ಉರಿಯಡಗೆ ಮುನ್ನಿನಂತಿರವು. ಆ ತೆರವಾದ ಸ್ಥಲಕುಳ ವಿವರ, ಸ್ಫಟಿಕದ ಬಹುವರ್ಣದಂತೆ. ವರ್ಣವಳಿಯೆ ಘಟವುಳಿದ ಮತ್ತೆ, ಮುನ್ನಿನಂದ, ನಿಃಕಳಂಕ ಮಲ್ಲಿಕಾರ್ಜುನಾ.