Index   ವಚನ - 683    Search  
 
ಲಿಂಗಸ್ಥಲ ಭಾವಸ್ವರೂಪವಾದಲ್ಲಿ, ಪ್ರಾಣಲಿಂಗಿ ಶರಣ ಐಕ್ಯನೆಂಬ ತ್ರಿವಿಧವ ತಾಳ್ದು, ಮೂರ್ತಿ ಕುರುಹುಗೊಂಬಲ್ಲಿ, ನಾನಾ ಮಧುರ ರಸದಂಡ ವೃಕ್ಷಂಗಳಲ್ಲಿ ಮಿಕ್ಕಾದ ಲತೆ ಪಚ್ಚೆ ಪೈರುಗಳಲ್ಲಿ ಕುಸುಮಗಂಧ ಮೃಗಗಂಧಂಗಳು ಸ್ಥಾವರ ಮುಂತಾದ ಸುಗಂಧ ಸುವಾಸನೆಗಳಿಗೆಲ್ಲಕ್ಕೂ ತದ್ರೂಪಿಂಗೆ ಹಿಂಗದಂತೆ ಬಂದೊದಗಿದ ಸಂಗದಂತೆ ಕುರುಹುಗೊಂಡೆಯಲ್ಲಾ. ಕಾಯದ ಜೀವದ ಉಭಯದ ಮಧ್ಯದಲ್ಲಿ ನಿಂದು ದೇವನಾದೆಯಲ್ಲಾ. ನಿನ್ನ ಲೀಲೆ ಕಾರಣವಾಗಿ, ಸಂದೇಹಿಗಳಿಗೆ ಸಂಕಲ್ಪಿಯಾಗಿ, ನಿರಂಗಿಗೆ ನಿರಾಲಂಬನಾಗಿ, ಸಮ್ಯಕ್‍ಜ್ಞಾನ ಮುಕುರದಂತೆ ಸಂಬಂಧಿಸಿದೆಯಲ್ಲಾ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ, ನಿನ್ನಿರವ ನೀನೇ ಬಲ್ಲೆ.