Index   ವಚನ - 707    Search  
 
ವೇದಂಗಳ ಉತ್ತರದಲ್ಲಿ, ಶಾಸ್ತ್ರದ ಮಧ್ಯದಲ್ಲಿ, ಪುರಾಣದ ಮೊದಲಿನಲ್ಲಿ, ಪೂರ್ವ ಆದಿಯ ಇಷ್ಟದಲ್ಲಿ, ಮಧ್ಯಭಾವ ಆತ್ಮನಲ್ಲಿ, ಉತ್ತರ ತುತ್ತತುದಿಯಲ್ಲಿ, ಮೆಟ್ಟಿ ನೋಡಲಾಗಿ ಹಿಂದೆಸೆಯಲ್ಲಿ ಕಂಡೆ, ಸ್ಥೂಲಸೂಕ್ಷ್ಮಕಾರಣ ಈ ಮೂರ. ಮುಂದೆಸೆಯಲ್ಲಿ ಕಂಡೆ ಭೂತಭವಿಷ್ಯದ್ವರ್ತಮಾನವ. ಹಿಂದೆಸೆ ಮುಂದೆಸೆಯ ಬಿಟ್ಟು, ಊರ್ಧ್ವಾಂಗ ಅಭಿಮುಖವಾಗಿ ನೋಡಲಾಗಿ ಮಹದಾಕಾಶವ ಕಂಡೆ. ಮಹದಾಕಾಶದ ಮಧ್ಯದಲ್ಲಿ ಒಂದು ನಿಃಕಲತತ್ವ. ಆ ನಿಃಕಲತತ್ವದ ರೂಪು, ಆರೋಹ ಅವರೋಹವಾಗಿ ಎಡೆಯಾಡುತ್ತಿಪ್ಪುದು. ಅದು ಅಂಗಕ್ಕೆ ಲಿಂಗವಾಗಿ, ಆತ್ಮಂಗೆ ಅರಿವಾಗಿ, ಹಿಂದು ಮುಂದು ಒಂದೆಯಾಗಿಪ್ಪ ನಿಜ ನಿಂದ ನಿಲವು. ನಿಃಕಳಂಕ ಮಲ್ಲಿಕಾರ್ಜುನನು ದ್ವಂದ್ವವಳಿದ ನಿರಂಗ.