Index   ವಚನ - 722    Search  
 
ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತ್ರಿಸಂಚವನರಿತು, ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯವನರಿತು, ಭಕ್ತಿಜ್ಞಾನವೈರಾಗ್ಯವೆಂಬ ಭಿತ್ತಿಯ ಕಂಡು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಚತುಷ್ಟಯವ ಕಂಡು, ರಸ ಗಂಧ ಶಬ್ದ ಸ್ಪರ್ಶಂಗಳಲ್ಲಿ, ದಶವಾಯು ಅಷ್ಟಮದ ನವದ್ವಾರಂಗಳಲ್ಲಿ, ಶೋಕ ಮೋಹ ರಾಗ ವಿರಾಗಂಗಳಲ್ಲಿ, ಇಂತಿವರಲ್ಲಿ ಆತ್ಮನ ನಾನಾ ಗುಣಭೇದಂಗಳಲ್ಲಿ, ಹಿಡಿವುದ ಹಿಡಿದು, ಬಿಡುವುದ ಬಿಟ್ಟು, ಒಡಗೂಡುವುದ ಒಡಗೂಡಿ, ಮಹಾನಿಜ ಸಾಧ್ಯವಾದಲ್ಲಿ, ಕಾಯದ ಅಳಿವು, ಜೀವದ ಭವ ಎರಡಳಿವನ್ನಕ್ಕ, ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಒಂದು ಕುರುಹು. ಆ ಕುರುಹು ನಿಃಪತಿಯಹನ್ನಕ್ಕ, ಶೂಲದ ಮೇಲಣ ಘಟ ಚೇತನ ಹೋಹನ್ನಕ್ಕ, ಅಭಿಲಾಷೆಯಿಂದ ಕೆಲವರ ಬೋಧಿಸಬೇಡ. ಇಂತೀ ಬಿಡುಮುಡಿಗಳಲ್ಲಿ ಕಳೆದುಳಿದ ಮಹಾತ್ಮಂಗೆ ಹಿಂದುಮುಂದಿಲ್ಲ, ಸಂದುಸಂಶಯವಿಲ್ಲ. ಪನ್ನಗಂಗೆ ತಲೆ ಬಾಲವಲ್ಲದೆ, ತನ್ನಲ್ಲಿ ಉದಿಸಿದ ಕಾಳಕೂಟಕ್ಕುಂಟೆ, ತಲೆ ಬಾಲವೆಂಬ ಭೇದ? ಅರಿವನ್ನಕ್ಕ ಸ್ಥಲ, ಅರಿವು ಕರಿಗೊಂಡಲ್ಲಿ ಪರಿಪೂರ್ಣ. ಉಭಯದೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.