Index   ವಚನ - 809    Search  
 
ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು, ಬೇಡ ಬದುಕೆಂದಡೆ ಆರೆನೆಂದ. ಅದೇತಕ್ಕೆ ಆಕೆಯ ದೂರೆಂದಡೆ ಅವ ಬಾತಿಗೇಡಿ. ಅವಳ ತಾಯ ಕೊಟ್ಟಡೆ ಇರ್ಪೆನೆಂದು ಕೂಡಿಕೊಂಡ. ಅಜಾತರೊಂದಿಗೆ ಹೇಳೆ, ನೀತಿ ಲೇಸಾಯಿತ್ತು ಅತ್ತೆ ಅಳಿಯಂಗೆ. ಅತ್ತೆ ಅಳಿಯನ ಒಲ್ಲೆನೆಂದು ಹೊತ್ತುಹೋರುತ್ತಿರಲಾಗಿ, ಅಳಿಯ ಅತ್ತೆಯ ಹಿಡಿದು ಅಳಿದನುಟ್ಟ ಸೀರೆಯ. ಮೊತ್ತದ ಭಗವ ಕಂಡು ಒತ್ತಿಹಿಡಿಯಲಾಗಿ, ಸತ್ತಳು ಅತ್ತೆ ಅಳಿಯನ ಕೈಯಲ್ಲಿ. ಅತ್ತೆಯ ಕಾಲುದೆಸೆಯಲ್ಲಿ ಕುಳಿತು, ಎತ್ತಿ ನೋಡಲಾಗಿ, ನಿಶ್ಚಯವಾಯಿತ್ತು ಅತ್ತೆಯ ಭಗ. ಹುಟ್ಟಿದರು ಮೂವರಲ್ಲಿ, ಕೆಲದಲ್ಲಿ ಇಬ್ಬರು, ನಡುವೆ ಒಬ್ಬನಾಗಿ. ಇಬ್ಬರ ಬಿಟ್ಟು, ಒಬ್ಬನ ಹಿಡಿದು ಅಬ್ಬರಿಸಲಾಗಿ, ಅವನೆದ್ದು ಬೊಬ್ಬೆಯ ಹೊಯ್ದ. ಹೊಯ್ದ ಹೊಯ್ಗಳಿನಲ್ಲಿ ಅತ್ತೆಯ ತಂದ ಅಳಿಯ, ನಾಮನಷ್ಟವಾದ. ಇಂತಿದನೆತ್ತಲೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.