Index   ವಚನ - 11    Search  
 
ಅಗಮ್ಯ, ಅಗೋಚರವಾದ ಪರಬ್ರಹ್ಮವನು ಪ್ರಮಾಣಕ್ಕೆ ತಂದು ಹೇಳುವಿರಯ್ಯಾ. ಪ್ರಮಾಣಕ್ಕತೀತವಾಗಿರ್ಪುದು ಪರಬ್ರಹ್ಮವು. ಹಳದಿ, ಹಸಿರು, ಕೆಂಪು, ಬಿಳಿದು, ನೀಲ, ಮಾಣಿಕ್ಯವೆಂಬ ಷಡ್ವರ್ಣಗಳಿಂದ ವರ್ಣಿಸಿ ಹೇಳುವಿರಯ್ಯಾ; ವರ್ಣಾತೀತವಾದ ವಸ್ತುವನು ವರ್ಣಿಸುವ ಪರಿಯಿನ್ನೆಂತು ಹೇಳಿರಯ್ಯಾ ! ಜಪ-ತಪ-ಮಂತ್ರ-ಸ್ತೋತ್ರಂಗಳಿಂದ ವಾಚ್ಯಕ್ಕೆ ತಂದು ಹೇಳುವಿರಯ್ಯಾ; ವಾಚಾತೀತವಾದ ವಸ್ತುವನು ವಾಚ್ಯಕ್ಕೆ ತರುವುದಿನ್ನೆಂತು ಹೇಳಿರಯ್ಯಾ ! ಇಂತೀ ಎಲ್ಲವನು ತನ್ನ ಪರಮಜ್ಞಾನದೃಷ್ಟಿಗೆ ಮಿಥ್ಯವೆಂದು ತಿಳಿಯುವುದೇ ಶಿವಜ್ಞಾನ. ಆ ಶಿವಜ್ಞಾನವೆಂಬರುಹೇ ತಾನೆಂಬ ತನು. ತನ್ನಲ್ಲಿ ತಾನೇ ತಿಳಿಯುವುದೀಗ ಅದೇ ಬ್ರಹ್ಮಜ್ಞಾನವಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.