Index   ವಚನ - 22    Search  
 
ಶಿವಶಿವಾ, ತಾವಾರೆಂಬುದನರಿಯದೆ ತಮ್ಮ ನಿಜವನು ಮರೆದು ಈ ಮರುಳ ಮಾನವರು ಕೆಟ್ಟ ಕೇಡ ಪೇಳ್ವೆ, ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆನೆ ಮೊದಲು ಇರುವೆ ಕಡೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ, ತೊಡದ ದೇಹವ ತೊಟ್ಟು, ಮೆಟ್ಟದ ಭೂಮಿಯ ಮೆಟ್ಟಿ, ಉಣ್ಣದ ಆಹಾರವನುಂಡು, ಭವಭವದಲ್ಲಿ ಘಾಸಿಯಾಗಿ, ಕಡೆಯಲ್ಲಿ ಮನುಷ್ಯದೇಹವ ತಾಳಿದಲ್ಲಿ ವಾತ ಪಿತ್ಥ ಶ್ಲೇಷ್ಮ ಮೊದಲಾದ ಮುನ್ನೂರರುವತ್ತು ರೋಗಾದಿ ಬಾಧೆಗಳಿಂದ ಕಂದಿ ಕುಂದಿ ನೊಂದು ಬೆಂದು ತಾಪತ್ರಯಾಗ್ನಿಯಿಂದ ದಗ್ಧವಾದ ದುಃಖವ ಪೇಳಲಿಕ್ಕೆ ಸಹಸ್ರಹೆಡೆಯ ಶೇಷಂಗೆ ಎರಡು ಸಹಸ್ರಜಿಹ್ವೆಯಿಂದ ಅಳವಲ್ಲ, ಸಹಸ್ರನೇತ್ರವುಳ್ಳ ದೇವೇಂದ್ರಂಗೆ ನೋಡೆನೆಂದರೆ ಅಸಾಧ್ಯ. ಚತುರ್ಮುಖಬ್ರಹ್ಮಂಗೆ ಪೇಳಲಿಕ್ಕೆ ಅಗಮ್ಯ ಅಗೋಚರ. ಇಂತಿದನು ಕಂಡು, ಕೇಳಿ ಮೈಮರೆದು, ಹೇಸಿಕಿ ಸಂಸಾರದಲ್ಲಿ ಸಿಲ್ಕಿ ಸತ್ತುಹೋಗುವ ಹೇಸಿಮೂಳ ಹೊಲೆಮಾದಿಗರಿಗೆ ಶಿವಪಥವು ಎಂದೆಂದಿಗೂ ಸಾಧ್ಯವಿಲ್ಲ, ಅಸಾಧ್ಯವೆಂದಾತ ನಿಮ್ಮ ಶರಣ ವೀರಾಧಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.