ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ,
ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ,
ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ.
ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು
ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು,
ಆಚರಿಸುವ ಜ್ಞಾನಕಲಾತ್ಮನಿಗೆ
ಈ ಲೋಕದ ಜಡಜೀವರು ಕಡುಪಾತಕರು ಬಂದು
ಈ ಸಂಸಾರದಲ್ಲಿ ಪಾರಮಾರ್ಥವುಂಟು,
ಇದರೊಳಗೆ ಸಾಧಿಸಬೇಕೆಂದು
ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು.
ಇದಕ್ಕೆ ಉಪಮೆ-
ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು
ಬಂದ ಗಣಂಗಳಾರಾರೆಂದಡೆ:
ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು.
ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು.
ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು.
ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ
ಏಳನೂರೆಪ್ಪತ್ತು ಪ್ರಮಥಗಣಂಗಳು.
ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು.
ಅವರೆಲ್ಲರು ಹುಚ್ಚರು, ನೀವೇ ಬಲ್ಲವರು.
ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು
ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ
ಪರಶಿವಲಿಂಗಲೀಲಾವಿನೋದದಿಂ
ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು.
ಇದರನುಭಾವವ ತಿಳಿಯಬಲ್ಲರೆ ಹೇಳಿರಿ;
ಅರಿಯದಿದ್ದರೆ ಕೇಳಿರಿ.
ತನು-ಮನ-ಧನ ನೀನಲ್ಲ,
ಪಂಚವಿಂಶತಿತತ್ವ ನೀನಲ್ಲ,
ಪಂಚಭೂತಪ್ರಕೃತಿ ನೀನಲ್ಲ,
ಮನ ಮೊದಲಾದ ಅರವತ್ತಾರುಕೋಟಿ
ಕರಣಾದಿ ಗುಣಂಗಳು ನೀನಲ್ಲ.
ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು
ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು
ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ,
ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ,
ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾಧಿಸೆಂದು
ಹಾಡಿದರಲ್ಲದೆ ಅವರೇನು ದಡ್ಡರೇ?
ನೀವೇ ಬಲು ಬುದ್ಧಿವಂತರು, ಬಲುಜಾಣರು !
ಇಂಥ ಯುಕ್ತಿ ವಿಚಾರವ ಹೇಳುವ
ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ,
ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ
ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು,
ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು,
ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ
ಹಾಕೆಂದ ಕಾಣಾ ನಿಮ್ಮ ಶರಣ ವೀರಾಧಿವೀರ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.