Index   ವಚನ - 47    Search  
 
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.