Index   ವಚನ - 66    Search  
 
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.