Index   ವಚನ - 120    Search  
 
ಎಮ್ಮ ಶಿವಗಣಂಗಳು ಕಲ್ಯಾಣಪುರದಲ್ಲಿ ಇಂತಪ್ಪ ಕಾಮಾಟದಿಂದ ಕಾಯಕವ ಮಾಡಿ ಜಂಗಮಾರ್ಚನೆ ಮಾಡುತ್ತಿರ್ದರಲ್ಲದೆ, ಲೌಕಿಕರ ಹಾಗೆ ಮಣ್ಣು ಕಲ್ಲಿನ ಕಾಮಾಟವ ಮಾಡಿ ನಾಲ್ಕು ಹಾಗದ ಕಾಂಚನವ ತಂದು, ಗುರು-ಲಿಂಗ-ಜಂಗಮಕ್ಕೆ ಭಿನ್ನವಿಟ್ಟು ಅರ್ಚಿಸಿ, ಫಲಪದವ ಪಡವರೆ, ಇಲ್ಲೆಂಬ ಹಾಗೆ. ಮತ್ತಂ, ಒಂದು ಸಮಯದಲ್ಲಿ ಮಾಡಿದಡೆಯೂ ಮಾಡುವರು. ಮಾಡಿದಡೆಯೂ ಜ್ಞಾನಕ್ಕೆ ಹಾನಿ ಇಲ್ಲ, ದೋಷವಿಲ್ಲ. ಅದೆಂತೆಂದಡೆ : ಶಿವಕೃಪೆಯಿಂ ದೇಹವ ತಾಳಿ ಮರ್ತ್ಯಲೋಕಕ್ಕೆ ಬಂದ ಮೇಲೆ, ಆ ದೇಹದಲ್ಲಿರುವ ಪರಿಯಂತರದಲ್ಲಿ ಅನ್ನ ಉದಕ ವಸ್ತ್ರದಿಂದ ದೇಹವ ರಕ್ಷಿಸಬೇಕಲ್ಲದೆ, ಆ ಅನ್ನ ಉದಕ ವಸ್ತ್ರದಿಂದ ದೇಹದ ಶೋಷಣವ ಮಾಡಲಾಗದು, ಮಾಡಿದಡೆ ಜ್ಞಾನಕ್ಕೆ ಹಾನಿ. ಅದೇನು ಕಾರಣವೆಂದಡೆ: ಅಂತಪ್ಪ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಸುಖಿಸಿದಡೆ ಜ್ಞಾನಕ್ಕೆ ಹಾನಿ. ಹೀಗೆಂದರೆಂದು ಆ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಶೋಷಣೆಯ ಮಾಡಿದಡೆಯು ಜ್ಞಾನಕ್ಕೆ ಹಾನಿ. ಈ ಉಭಯ ಭೇದವ ತಿಳಿದು ಆ ದೇಹ ನಿಮಿತ್ಯವಾಗಿ ಪ್ರಪಂಚವ ಮಾಡುವರಲ್ಲದೆ ಇಂದಿಂಗೆಂತು ನಾಳಿಂಗೆಂತು ಎಂದು ಹೆಂಡರು ಮಕ್ಕಳುಪಾದಿಯ ಪಿಡಿದು ಮಾಡುವರೆ ? ಮಾಡುವರಲ್ಲ. ಈ ನಿರ್ಣಯವನು ಶಿವಜ್ಞಾನಶರಣರೇ ಬಲ್ಲರಲ್ಲದೆ, ಈ ಲೋಕದ ಜಡಮತಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.