Index   ವಚನ - 121    Search  
 
ಇಂತಪ್ಪ ಭೇದವ ತಿಳಿಯದೆ ಪುರಾತರ ವಚನವ ನೋಡಿ ಕೇಳಿ, ಹೊನ್ನು, ಹೆಣ್ಣು, ಮಣ್ಣು ಬಿಟ್ಟು ಪ್ರಪಂಚವ ಬಿಟ್ಟೆವೆಂಬಿರಿ, ಬಿಟ್ಟ ಪರಿಯ ಪೇಳಿರಯ್ಯ ? ಹೊನ್ನಲ್ಲವೇ ಆತ್ಮ ? ಹೆಣ್ಣಲ್ಲವೇ ಮನಸ್ಸು ? ಮಣ್ಣಲ್ಲವೇ ಪೃಥ್ವಿತತ್ವಾಂಶಭೂತವಾದ ದೇಹವು ? ಇಂತಪ್ಪ ಹೊನ್ನು, ಹೆಣ್ಣು, ಮಣ್ಣು ಒಳಗಿಟ್ಟುಕೊಂಡು ಬಾಹ್ಯದ ಹೊನ್ನು ಹೆಣ್ಣು ಮಣ್ಣನೆ ಬಿಟ್ಟರೆ, ಬಿಟ್ಟಂತಾಯಿತೇ ಎಲಾ ಮರುಳ ಮಾನವರಿರಾ ? ದೇಹವ ದಗ್ಧಮಾಡಬೇಕೆಂದು ಅನ್ನ ಉದಕವ ಬಿಟ್ಟು, ಅರಣ್ಯಕ್ಕೆ ಹೋಗಿ, ಕಂದಮೂಲ ಪರ್ಣಾಹಾರವ ಭಕ್ಷಿಸಿ ತನು ಒಣಗಿಸಿದರೇನು ದೇಹದಗ್ಧವಾದಂತಾಯಿತೇ ? ಆಗದು. ಹುತ್ತದ ಮೇಲೆ ಬಡಿದು ಸರ್ಪನ ಕೊಂದಂತಾಯಿತಲ್ಲದೆ ದೇಹ ದಗ್ಧವಾಗಲರಿಯದು ಎಲೆ ಮರುಳ ಮಾನವರಿರಾ. ಅದೆಂತೆಂದೊಡೆ: ಶಿವಜ್ಞಾನೋದಯವಾಗಿ ಗುರುಕಾರುಣ್ಯವ ಪಡದು, ಲಿಂಗಾಂಗಸಂಬಂಧಿಯಾದ ಶಿವಶರಣನ ದೇಹವು ಜ್ಞಾನಾಗ್ನಿಯಲ್ಲಿ ದಗ್ಧವಾಯಿತಲ್ಲದೆ ಉಳಿದ ಜೀವಾತ್ಮರ ದೇಹವು ದಗ್ಧವಾಗಲರಿಯದು. ದೇಹದ ಗುಣವ ಬಿಡಬೇಕೆಂಬಿರಿ, ಬಿಡಲಿಕ್ಕೇನು ಕಟ್ಟಿದ ಪಶುಗಳೆ ? ಬಿಡಲಿಕ್ಕೇನು ಹಟ್ಟಿಯ ಪಶುಗಳೆ ? ಕಣ್ಣಿಗೆ ಕಾಣಿಸದ, ಕೈಗೆ ಸಿಕ್ಕದ ಗುಣಗಳ ಬಿಡಬೇಕೆಂಬಿರಿ. ಇದಕ್ಕೆ ದೃಷ್ಟಾಂತ: ಸೂರ್ಯನ ಬಿಂಬ ಜಲದಲ್ಲಿ ಕಾಣುವದು. ಆ ಬಿಂಬವ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಜ್ಯೋತಿಯ ಪ್ರಭೆಯ ಕಡೆಯಕ್ಕೆ ತೆಗೆದು ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ದೇಹದೊಳಗಣ ಪ್ರಾಣವ ಬಹಿಷ್ಕರಿಸಿ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಇಂತೀ ಭೇದವ ತಿಳಿಯದೆ ವನವಾಸದಲ್ಲಿ ತನುಮನವ ಬಳಲಿಸಿ ಭವದತ್ತ ಮುಖವಾಗಿ ಹೋಗುವ ಹೇಸಿಮೂಳರ ಕಂಡು ನಾಚಿತ್ತಯ್ಯ ಎನ್ನ ಮನವು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.