Index   ವಚನ - 158    Search  
 
ಪ್ರಸಾದಿ ಪ್ರಸಾದಿಗಳೆಂದು ಹೆಸರಿಟ್ಟುಕೊಂಡು ಹಸ್ತಪರುಷವಿಲ್ಲದ ಪದಾರ್ಥ ಕಿಲ್ಬಿಷ ಲಿಂಗಕ್ಕೆ ಅರ್ಪಿಸಲಾಗದೆಂದು ಶ್ರುತಿವಾಕ್ಯ ಕೇಳಿ, ಲಿಂಗಜಂಗಮವ ಕಂಡಲ್ಲಿ ಅನ್ನ ಉದಕವ ಜಂಗಮದ ಹಸ್ತಪರುಷದಿಂದ ಸೇವಿಸುವರು. ಸೂಳೆಯರ ಕಂಡಲ್ಲಿ ವೀಳ್ಯವ ಕೊಟ್ಟು ಆ ವೀಳ್ಯವ ಅವರು ಅರ್ಧ ಕಡಿದು ಕೊಟ್ಟರೆ ತಿಂಬುವರು. ಎಲ್ಲಿದೆಯಯ್ಯಾ ನಿಮ್ಮ ಹಸ್ತಪರುಷ ? ಮೋಹದ ಪುತ್ರರಿಗೆ ಆವುದಾನೊಂದು ಅಮೃತಫಲವ ತಂದುಕೊಟ್ಟು ಆ ಪುತ್ರರು ಅದರ ಅರ್ಧ ಫಲವ ಸೇವಿಸಿ ತಮ್ಮ ತಂದೆಗೆ ನೀ ತಿನ್ನೆಂದು ಕೊಟ್ಟರೆ ಆ ಪುತ್ರನ ಮಮಕಾರದಿಂ ಎಂಜಲೆಂಬುದನ್ನರಿಯದೆ ತಿಂಬುವರಿಗೆ ಎಲ್ಲಿಯದಯ್ಯ ಹಸ್ತಪರುಷ ? ಇಂತಪ್ಪವರು ಪ್ರಸಾದಿಗಳೆಂದಡೆ ಶಿವಜ್ಞಾನಿಗಳಾದ ಶರಣರು ಕಂಡು ತಮ್ಮ ಹೊಟ್ಟೆಹುಣ್ಣಾಗುವತನಕ ಶಬ್ದಮುಗ್ಧರಾಗಿದ್ದರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.