Index   ವಚನ - 211    Search  
 
ದ್ವಾದಶಮಾಸ, ಚತುದರ್ಶಿ, ದ್ವಾದಶಿ, ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ, ಶಿವರಾತ್ರಿ ಅಮವಾಸ್ಯೆ ಫಲಪುಣ್ಯ ಮಹಾದೊಡ್ಡದು ಎಂದು ಸ್ಕಂದಪುರಾಣ ಬ್ರಹ್ಮೋತ್ತರಕಾಂಡ, ಶ್ರುತಿವಾಕ್ಯಗಳಿಂದ ಕೇಳಿ, ಅಂತಪ್ಪ ಮಾಘಮಾಸದ ಚತುರ್ದಶಿದಿವಸ ಒಂದೊತ್ತು ಉಪವಾಸವ ಮಾಡಿ, ಪತ್ರಿ, ಪುಷ್ಪ. ಕಡ್ಡಿ, ಬತ್ತಿಯ ತಂದು ಸಾಯಂಕಾಲಕ್ಕೆ ಸ್ನಾನವ ಮಾಡಿ, ಜಂಗಮವ ಕರತಂದು ಅರ್ಚಿಸಿ, ಲಿಂಗವ ಪತ್ರಿ, ಪುಷ್ಪ, ಅಭಿಷೇಕ, ಕಡ್ಡಿ, ಬತ್ತಿ, ಏಕಾರತಿ ಪಂಚಾರತಿಗಳಿಂದ ಪೂಜಿಸಿ, ಪಾದೋದಕವ ಸೇವಿಸಿ, ಆ ಮೇಲೆ ತಮ್ಮ ಗೃಹದಲ್ಲಿ ಮಾಡಿದ ಉತ್ತಮವಾದ ಫಲಹಾರ ಜೀನಸುಗಳು ಅಂಜೂರ, ದ್ರಾಕ್ಷಿ, ಹಲಸು, ತೆಂಗು, ಕಾರಿಕ, ಬಾಳೇಹಣ್ಣು ಮೊದಲಾದ ಫಲಹಾರ ಮತ್ತಂ, ಬೆಂಡು, ಬೆತ್ತಾಸ, ಖರ್ಜೂರ, ದೂದುಪೇಡೆ, ಬುಂದೆ, ಲಡ್ಡು ಮೊದಲಾದ ಫಲಹಾರ. ಇಂತಪ್ಪ ಫಲಹಾರ ಜೀನಸು ಎಡೆಮಾಡಿ ಪ್ರಸಾದವೆಂದು ಕೈಕೊಂಡು, ಲಿಂಗಕ್ಕೆ ತೋರಿ ತೋರಿ ತಮ್ಮ ಮನಬಂದ ಪದಾರ್ಥವ ಅಂಗಕ್ಕೆ ಗಡಣಿಸಿಕೊಂಡು, ನಾವು ಇಂದಿನ ದಿವಸ ಉದಯದಿಂ ಸಾಯಂಕಾಲದ ಪರಿಯಂತರವಾಗಿ, ಒಂದೊತ್ತು ಉಪವಾಸ ಮಾಡಿ ಶಿವಯೋಗ ಮಾಡಿದೆವೆಂದು ಮೂಢ ಮಂದಮತಿ ಅಧಮರ ಮುಂದೆ ತಮ್ಮ ಬಿಂಕವ ಪೇಳಿ, ರಾತ್ರಿಯಲ್ಲಿ ಜಾಗರಣಿ ಮಾಡಬೇಕೆಂದು ತಮ್ಮ ಅಂಗದ ಮೇಲಣ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು ಸ್ಥಾವರಲಿಂಗದ ಗುಡಿಗೆ ಹೋಗಿ ಆ ಲಿಂಗದ ಪೂಜೆಯಿಂದ ಬೆಳಗ ಕಳೆದು ಉದಯಕ್ಕೆ ಶಿವರಾತ್ರಿ ಅಮವಾಸೆ ದೊಡ್ಡದೆಂದು ಹಳ್ಳ ಹೊಳೆಗೆ ಹೋಗಿ, ಛಳಿಯಲ್ಲಿ ತಣ್ಣೀರೊಳಗೆ ಮುಳುಗಿ, ಸ್ನಾನವ ಮಾಡಿ ಬಂದು ಜಂಗಮವ ಕರಿಸಿ, ಮೃಷ್ಟಾನ್ನವ ಹೊಟ್ಟೆತುಂಬ ಘಟ್ಟಿಸಿ, ಶಿವರಾತ್ರಿ ಶಿವಯೋಗದ ಪಾರಣೆಯಾಯಿತೆಂದು ಮಹಾ ಉಲ್ಲಾಸದಿಂ ತಮ್ಮೊಳಗೆ ತಾವೇ ಇಪ್ಪರಯ್ಯಾ. ಇಂತಪ್ಪ ಅವಿಚಾರಿಗಳಾದ ಅಜ್ಞಾನ ಜೀವಾತ್ಮರಿಗೆ ವೀರಮಾಹೇಶ್ವರರೆಂದಡೆ ಪರಶಿವಯೋಗಿಗಳಾದ ಶಿವಶರಣರು ನಗುವರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.