Index   ವಚನ - 212    Search  
 
ಇಂತಪ್ಪ ತ್ರಿವಿಧಾಚರಣೆಯಲ್ಲಿ ಭಿನ್ನಜ್ಞಾನಿಗಳಾಗಿ ಭಿನ್ನ ಕ್ರಿಯಗಳಾಚರಿಸಿ, ಭಿನ್ನಭಾವ ಮುಂದುಗೊಂಡು ವ್ರತವನಾಚರಿಸುವ ಅಜ್ಞಾನಿಗಳಾದ ಜೀವಾತ್ಮರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿಯುವನಯ್ಯ ? ಮತ್ತೆಂತೆಂದೊಡೆ : ಸುಜ್ಞಾನೋದಯವಾಗಿ ಸಕಲಪ್ರಪಂಚ ನಿವೃತ್ತಿಯ ಮಾಡಿ, ಶ್ರೀಗುರುಕಾರುಣ್ಯವ ಪಡೆದು, ಲಿಂಗಾಂಗಸಮರಸವಾಗಿ ಸರ್ವಾಂಗಲಿಂಗಮಯ ತಾನೆಂದು ತಿಳಿದುನೋಡಿ, ಅಂತಪ್ಪ ಘನಮಹಾಲಿಂಗ ಇಷ್ಟಬ್ರಹ್ಮವನು ತನುವಿನಲ್ಲಿ ಸ್ವಾಯತವ ಮಾಡಿ, ಆ ತನುಪ್ರಕೃತಿಯನಳಿದು ಆ ಇಷ್ಟಲಿಂಗದ ಸತ್ಕ್ರಿಯವನಾಚರಿಸುವುದೇ ದಿನಚರಿ ವಾರ ಸೋಮವಾರ ವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮದ ಚಿತ್ಕಲಾಸ್ವರೂಪವಾದ ನಿಷ್ಕಲಪ್ರಾಣಲಿಂಗವನು ಮನದಲ್ಲಿ ಸ್ವಾಯತವಮಾಡಿ, ಆ ಮನೋಪ್ರಕೃತಿಯನಳಿದು ಆ ನಿಷ್ಕಲ ಪ್ರಾಣಲಿಂಗದ ಸುಜ್ಞಾನಕ್ರಿಯಗಳನಾಚರಿಸುವುದೇ ದ್ವಾದಶಮಾಸದೊಳಗೆ ಶ್ರೇಷ್ಠವಾದ ಶ್ರಾವಣಮಾಸದವ್ರತವೆಂಬೆ. ಅಂತಪ್ಪ ಇಷ್ಟಬ್ರಹ್ಮಾನಂದಸ್ವರೂಪವಾದ ನಿರಂಜನಭಾವಲಿಂಗವನು - ಧನವೆಂದಡೆ ಆತ್ಮ. ಅಂತಪ್ಪ ಆತ್ಮನಲ್ಲಿ ಸ್ವಾಯತವ ಮಾಡಿ, ಆ ಆತ್ಮಪ್ರಕೃತಿಯನಳಿದು, ಆ ನಿರಂಜನ ಭಾವಲಿಂಗದ ಮಹಾಜ್ಞಾನಾಚರಣೆಯನಾಚರಿಸುವುದೇ ದ್ವಾದಶಮಾಸ, ದ್ವಾದಶ ಚತುರ್ದಶಿ, ದ್ವಾದಶ ಅಮವಾಸಿಯೊಳಗೆ ಮಾಘಮಾಸದ ಚತುರ್ದಶಿ ಶಿವರಾತ್ರಿಅಮವಾಸೆಯ ವ್ರತವೆಂಬೆ. ಇಂತೀ ತ್ರಿವಿಧಲಿಂಗ ಮೊದಲಾದ ಚಿದ್ಘನಲಿಂಗವು ತನ್ನ ಸರ್ವಾಂಗದಲ್ಲಿ ಸ್ವಾಯತವುಂಟೆಂದು ಶ್ರೀಗುರುಮುಖದಿಂ ತಿಳಿಯದೆ ಲಿಂಗವಿರಹಿತರಾಗಿ, ಬಾಹ್ಯದ ಕ್ರಿಯೆಗಳ ಪಿಡಿದು ವ್ರತವನಾಚರಿಸುವುದೆಲ್ಲ ಮಾಯಾವಿಲಾಸ ಭವದ ಬಟ್ಟೆ ಎಂದು ತಿಳಿಯದೆ ಭವಭಾರಿಗಳಾಗಿ, ಭವಕ್ಕೆ ಭಾಜನವಾಗಿ ಕೆಟ್ಟು ಮನು ಮುನಿ ದೇವ ದಾನವರು ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ತಮ್ಮ ನಿಲುವು ತಾವಾರೆಂಬುದನ್ನರಿಯದೆ ಇದಿರಿಟ್ಟು ಕೆಟ್ಟುಪೋದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.