Index   ವಚನ - 263    Search  
 
ಮೃತ್ಯುವೆಂಬ ಪಟ್ಟಣದಲ್ಲಿ ಒಂದು ಚಿತ್ರವ ಕಂಡೆ. ಆಡು ಆನೆಯ ನುಂಗಿದ ಕಂಡೆ. ಗುಂಗಾಡಿ ಹುಲಿಯ ನುಂಗಿದ ಕಂಡೆ. ಹಂದಿ ಶುನಿಗಳ ಕಚ್ಚಿ ಹರಿದಾಡುವದ ಕಂಡೆ. ಗಗನದೊಳಗಣ ಚಂದ್ರನ ಭೂಮಿಯೊಳಗಣ ಸರ್ಪ ನುಂಗಿದ್ದ ಕಂಡೆ. ಕೋತಿ ಕುದುರೆಯನೇರಿ ಹರಿದಾಡುವದ ಕಂಡೆ. ಅರಸಿನ ಮಗ ಹೊಲತಿಯ ಸಂಗ ಮಾಡುವದ ಕಂಡೆ. ಅಷ್ಟರಲ್ಲಿಯೇ ಒಂದು ಇರುವೆ ಹುಟ್ಟಿ, ಅರಸಿನ ಮಗನ ನುಂಗಿ, ಹೊಲತಿಯ ಕೊಂದು, ಆನೆ ಆಡಿಗೆ ಕಚ್ಚಿ, ಹುಲಿ ಗುಂಗಾಡಿಯ ನುಂಗಿ, ಗಗನದ ಚಂದ್ರನವಗ್ರಹಿಸಿ, ಸರ್ಪನ ಕೊಂದು, ಹಂದಿ, ನಾಯಿ ಕುದುರೆ, ಕೋತಿಯ ಹತಮಾಡಿ, ಮೃತ್ಯುವೆಂಬ ಪಟ್ಟಣವ ಸುಟ್ಟು, ಇರುವೆಯ ಗರ್ಭದಲ್ಲಿ ಇಬ್ಬರು ಹತವಾದರು. ಇಬ್ಬರು ಹತವಾದಲ್ಲಿ ಹಲಬರು ಹತವಾದರು. ಈ ಭೇದವ ತಿಳಿಯಬಲ್ಲರೆ ಅಂಗಲಿಂಗಿ ಪ್ರಾಣಲಿಂಗಿ ಸರ್ವಾಂಗಲಿಂಗಿ ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.