Index   ವಚನ - 280    Search  
 
ವೀರಮಾಹೇಶ್ವರರು ಸರ್ವಾಂಗದಲ್ಲಿ ವಿಭೂತಿ-ರುದ್ರಾಕ್ಷಿ ಧಾರಣವಾಗಿ, ಶಿವಲಿಂಗವ ಧರಿಸಿ, ಕಾವಿಲಾಂಛನವ ಪೊದ್ದರೆಂದು ಈ ಮರ್ತ್ಯಲೋಕದ ಜಡಮತಿ ಮರುಳಮಾನವರು ತಾವು ಧರಿಸುತ್ತಿರ್ಪರು. ಇಂತಪ್ಪವರ ನಡತೆ ಎಂತಾಯಿತ್ತೆಂದರೆ, ಗುರುವನರಿಯದೆ ವಿಭೂತಿಧರಿಸುವರೆಲ್ಲ ಬೂದಿಯೊಳಗಣ ಕತ್ತೆಗಳೆಂಬೆ. ತಮ್ಮ ನಿಜವ ತಾವರಿಯದೆ ರುದ್ರಾಕ್ಷಿ ಧರಿಸುವರೆಲ್ಲ ಕಳವು ಮಾಡಿ ಕೈಯ ಕಟ್ಟಿಸಿಕೊಂಡ ಕಳ್ಳರೆಂಬೆ. ಲಿಂಗದ ಸ್ವರೂಪವ ತಿಳಿಯದೆ ಕೊರಳಲ್ಲಿ ಲಿಂಗವ ಕಟ್ಟುವರೆಲ್ಲ ವಾಳೆ ಆವಿಗೆ ಯಳಗುದ್ದಿಯ ಕಟ್ಟುವಂತೆ ಕಟ್ಟುವರೆಂಬೆ. ಜಂಗಮದ ನಿಲವ ಅರಿಯದೆ ಕಾವಿಯ ಲಾಂಛನ ಹೊದ್ದವರೆಲ್ಲ ರಕ್ತಮುಳುಗಿದ ಹಸಿಯ ಚರ್ಮವ ಹೊದ್ದವರೆಂಬೆ. ಇಂತಿದರನುಭಾವವ ತಿಳಿಯದೆ ಈಶ್ವರನ ವೇಷವ ಧರಿಸಿ ಉದರಪೋಷಣಕ್ಕೆ ತಿರುಗುವರೆಲ್ಲ ಜಾತಿಹಾಸ್ಯಗಾರರೆಂಬೆ. ಇಂತಪ್ಪ ವೇಷಧಾರಿಗಳ ಶಿವಸ್ವರೂಪರೆಂದು ಭಾವಿಸುವವರ ಶಿವಸ್ವರೂಪರೆಂದು ಹೇಳುವವರ, ಇಂತಪ್ಪ ಉಭಯ ಮೂಢಾತ್ಮರ ಮುಖದ ಮೇಲೆ ಲೊಟ್ಟಲೊಟ್ಟನೆ ಉಗುಳಿ ನಿಮ್ಮ ಗಣಂಗಳ ಪಾದರಕ್ಷೆಯಿಂದ ಘಟ್ಟಿಸಿ ಅಟ್ಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.