Index   ವಚನ - 285    Search  
 
ಪಂಚಶತಕೋಟಿ ಯೋಜನದಾಚೇಲಿ ನೆಲವಿಲ್ಲದ ಭೂಮಿಯ ಕಂಡೆ. ಆ ಭೂಮಿಯಲ್ಲಿ ನೀರಿಲ್ಲದೆ ಒಂದು ವೃಕ್ಷ ಪುಟ್ಟಿ ಬೇರಿಲ್ಲದೆ ಬೆಳೆವುದ ಕಂಡೆ. ಶಾಖೆ ಪರ್ಣ ಮೊಗ್ಗೆಯಿಲ್ಲದೆ ಕುಸುಮ ತೋರುವುದ ಕಂಡೆ. ಫಲವಿಲ್ಲದ ಹಣ್ಣು ರಸಪೂರಿತವಾಗಿ ವೃಕ್ಷದ ಕೊನೆಯಲ್ಲಿರುವುದ ಕಂಡೆ. ಆ ಹಣ್ಣಿಗೆ ಹಲವರು ಹವಣಿಸಿ ಕಾಣದೆ ಹಿಂದಕ್ಕೆ ಬಿದ್ದುದ ಕಂಡೆ. ಆ ಹಣ್ಣನು ಕೈಕಾಲು ಕಣ್ಣು ತಲೆಯಿಲ್ಲದ ಅಧಮನು ಸೇವಿಸಿ ಸತ್ತುದ ಕಂಡೆ. ಸತ್ತ ಸುದ್ದಿಯ ಕೇಳಿ ಸತ್ತರು ನಿಮ್ಮವರು. ಸಾಯದೆ ಬದುಕಿದರು ಎಮ್ಮಡಿಯ ಮಕ್ಕಳು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.