Index   ವಚನ - 10    Search  
 
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪ್ರಭು ಜಂಗಮವೆ ಸರ್ವಾಧಾರಪರಬ್ರಹ್ಮ ಘನಗಂಭೀರ ಪರತತ್ವಮೂರ್ತಿ ನೋಡ. ಜಂಗಮವೆ ನಿರುಪಮ ನಿರಾವಯವಸ್ತು ನೋಡ. ಜಂಗಮವೆ ನಿಷ್ಕಳಂಕ ನಿಶ್ಚಿಂತ ನೋಡಯ್ಯ. ಜಂಗಮವೆ ಸ್ವಯಚರಪರವಸ್ತು ನೋಡಯ್ಯ. ಜಂಗಮವೆ ಭೂರುದ್ರಮೂರ್ತಿ ನೋಡಯ್ಯ. ಜಂಗಮವೆ ಸತ್ಯಸದಾಚಾರಮೂರ್ತಿ ನೋಡಯ್ಯ. ಜಂಗಮವೆ ಸತ್ಕಿಯಾಸಮ್ಯಜ್ಞಾನಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತಿಪ್ರಿಯ ನೋಡಯ್ಯ. ಜಂಗಮವೆ ಗುರುಲಿಂಗಭಕ್ತರಿಗೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಪರಮಾನಂದ ಪರಿಣಾಮಿ ನೋಡಯ್ಯ. ಜಂಗಮವೆ ಸಚ್ಚಿದಾನಂದಭರಿತ ನೋಡಯ್ಯ. ಜಂಗಮವೆ ಜಗತ್ಪಾವನಮೂರ್ತಿ ನೋಡಯ್ಯ. ಜಂಗಮವೆ ಕಾರಣಾವತಾರಮೂರ್ತಿ ನೋಡಯ್ಯ. ಜಂಗಮವೆ ಅಂಗಲಿಂಗವೆರಡಕ್ಕೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತ ಮಾಹೇಶ್ವರರ ಸದ್ಧರ್ಮಸರ್ವಾಚಾರ ಸಂಪತ್ತಿನಾಚರಣೆಗೆ ಕಾರಣಕರ್ತ ನೋಡ ಸಂಗನಬಸವೇಶ್ವರ