ಹರಹರ ಶಿವಶಿವ ಜಯಜಯ
ಹರಗಣಂಗಳಾಚರಿಸಿದ ಸತ್ಕಾಯಕದಿಂದ
ಬಹುಜನ್ಮದ ದೋಷ ತೊಲಗುವುದಯ್ಯ.
ಸತ್ಕ್ರಿಯದಿಂದ ಕಾಲಕಾಮರ ಭಯ ಹರಿವುದಯ್ಯ.
ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ.
ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ.
ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ.
ಸದಾಚಾರದಿಂದ ಮನ ಸಿದ್ಧವಾಗುವುದಯ್ಯ.
ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ.
ಗಣಾಚಾರದಿಂದ ನಡೆ ಪರುಷವಾಗುವುದಯ್ಯ.
ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ.
ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ.
ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ.
ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ.
ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ.
ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ.
ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ.
ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು
ತಪ್ಪದು ನೋಡ.
ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ
ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು,
ಷೋಡಶವರ್ಣವೆ ಸದ್ಗುರುಮುಖದಿಂ
ಚಿದ್ಘನಲಿಂಗವ ಮಾಡಿಕೊಂಡು
ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ
ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ
ಪ್ರಮಥಗಣಂಗಳೆಲ್ಲ ಬಯಲೊಳಗೆ
ಮಹಾಬಯಲಾದರು ನೋಡ,
ಸಂಗನಬಸವೇಶ್ವರ
Art
Manuscript
Music
Courtesy:
Transliteration
Harahara śivaśiva jayajaya
haragaṇaṅgaḷācarisida satkāyakadinda
bahujanmada dōṣa tolaguvudayya.
Satkriyadinda kālakāmara bhaya harivudayya.
Samyajñānadinda māyāpāśa hindāguvudayya.
Sadbhaktiyinda pāvanasvarūparāguvurayya.
Liṅgācāradinda tanu śud'dhavāguvudayya.
Sadācāradinda mana sid'dhavāguvudayya.
Śivācāradinda dhana prasid'dhavāguvudayya.
Gaṇācāradinda naḍe paruṣavāguvudayya.
Bhr̥tyācāradinda nuḍi paruṣavāguvudayya.
Kriyācāradinda karmēndriyaṅgaḷu pavitravāguvavayya.
Jñānācāradinda jñānēndriyaṅgaḷu pāvanavāguvavayya.
Bhāvācāradinda karaṇaṅgaḷu nijasvarūpavāguvavayya.
Satyācāradinda viṣayaṅgaḷu liṅgamukhavāguvavayya.
Nityācāradinda vāyugaḷu mahāprasādavāguvavayya.
Dharmācāradinda liṅgāṅga ēkavāguvudayya.
Sarvācāradinda sarvāṅga jñānajyōtiyappudu
tappadu nōḍa.
Satkāyaka modalāda ṣōḍaśa kalenelegaḷe
sadgurumukhadiṁ cidaṅgava māḍikoṇḍu,
ṣōḍaśavarṇave sadgurumukhadiṁ
cidghanaliṅgava māḍikoṇḍu
sadgurumukhadiṁ eraḍaḷidu ēkasvarūpadinda
jyōtijyōti beradante basava modalāda
pramathagaṇaṅgaḷella bayaloḷage
mahābayalādaru nōḍa,
saṅganabasavēśvara