Index   ವಚನ - 42    Search  
 
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ : ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ, ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷ್ಠೆಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದ ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ