Index   ವಚನ - 46    Search  
 
ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ ಬೆಳಗುವ ಪರಂಜ್ಯೋತಿಮೂರ್ತಿ ಕೇಳ! ನಿತ್ಯನಿಜಾನಂದ ಪರಿಪೂರ್ಣದರಿವೆ! ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ, ಮಧ್ಯದಲ್ಲಿ ಪದಾರ್ಥವಯ್ಯ. ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ. ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ. ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ, ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ. ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ, ಹರುಷಾನಂದಜಲವುಕ್ಕಿ, ಅತಿಮೋಹದಿಂದ ಪದವನೆ ನೂರೆಂಟೆಳೆಯದಾರವ ಮಾಡಿ, ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ, ಮಹಾಪರಿಪೂರ್ಣಜ್ಞಾನವೆಂಬ ರಂಧ್ರವ ರಚಿಸಿ, ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು, ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ. ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ತೊಂಬತ್ತಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಸಾವಿರದ ಏಳೂನೂರ ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ. ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ, ಆಯಾಯ ಸರದ ಎಸಳುಗಳ ಮಧ್ಯದಲ್ಲಿ ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ ಮಹಾಪ್ರಸಾದವ ಪದಕವ ಮಾಡಿ ರಚಿಸಿ, ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ, ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ ಬೆಳಗಿನೊಳಗಣ ಮಹಾಬೆಳಗ ಸಾಧಿಸಿ, ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ, ಚತುರ್ಮುಖನ ಜಡಸಂಸಾರಕ್ಕೊಳಗಾಗದೆ, 'ಯದೃಷ್ಟಂ ತನ್ನಷ್ಟಂ' ಎಂದುದಾಗಿ, ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ, ಸಂಗನಬಸವೇಶ್ವರ