Index   ವಚನ - 47    Search  
 
ಅಯ್ಯ, ವರಕುಮಾರದೇಶಿಕೇಂದ್ರನೆ ಕೇಳಾ, ಚಿದ್ಘನಶರಣ ಪ್ರಸಾದಲಿಂಗವಾಗಿ ನಿಂದ ನಿಜಾಚರಣೆಯ ನಿಲುಕಡೆಯ, ಕಲ್ಯಾಣಪಟ್ಟಣದ ಅನುಭಾವ ಮಂಟಪದ ಶೂನ್ಯಸಿಂಹಾಸನದಲ್ಲಿ, ಬಸವ, ಚೆನ್ನಬಸವ, ಸಿದ್ಧರಾಮ, ಅಕ್ಕಮಹಾದೇವಿ, ನೀಲಲೋಚನೆ ಮೊದಲಾದ ಸಕಲಮಹಾಪ್ರಮಥಗಣಂಗಳೆಲ್ಲ ಮಹಾಪ್ರಭುಸ್ವಾಮಿಗಳಿಗೆ ಅಭಿವಂದಿಸಿ ಹಸ್ತಾಂಜಲಿತರಾಗಿ ಎಲೆ ಮಹಾಪ್ರಭುವೆ ನಿನ್ನ ಅನಾದಿ ಷಟ್ಸ್ಥಲ ನಿರಾಭಾರಿವೀರಶೈವಶರಣನ ನಿಜಾಚರಣೆಯ ನಿಲುಕಡೆಯ ದಯವಿಟ್ಟು ಕರುಣಿಸಬೇಕಯ್ಯ ಮಹಾಗುರುವೆ ಎಂದು ಬೆಸಗೊಂಡಲ್ಲಿ ಆಗ ಮಹಾಪ್ರಭುವು ಲಿಂಗಾಂಗಕ್ಕೆ ಭಿನ್ನವಿಲ್ಲದೆ ಹಸ್ತಮಸ್ತಕಸಂಯೋಗವ ಮಾಡಿ, ವೇಧಾ-ಮಂತ್ರ-ಕ್ರಿಯಾದೀಕ್ಷೆಯನಿತ್ತು, ಇಪ್ಪತ್ತೊಂದು ತೆರದ ವಿಚಾರವನರುಪಿ, ನೂರೊಂದುಸ್ಥಲದಾಚರಣೆಯ, ಇನ್ನೂರಹದಿನಾರು ಸ್ಥಲದ ಸಂಬಂಧವ ತೋರಿ, ಸರ್ವಾಚಾರ ಸಂಪತ್ತಿನಾವರಣದ ಸ್ವಸ್ವರೂಪು ನಿಲುಕಡೆಯ ತೋರಿಸಿ, ಸಾಕಾರನಿರಾಕಾರದ ನಿಜದ ನಿಲುಕಡೆಯನರುಪಿ, ನಿಜಶಿವಯೋಗದ ನಿರ್ಣಯವ ಕರುಣಿಸಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ ತಾವೆಂದರುಪಿದ ನೋಡ. ಇಂತು ಚೆನ್ನಬಸವೇಶ್ವರಸ್ವಾಮಿಗಳು ಬೆಸಗೊಂಡು ತಮ್ಮ ಚಿದಂಗಸ್ವರೂಪರಾದ ಚಿದ್ಘನರಶರಣ ನಿರ್ಲಜ್ಜಶಾಂತಯ್ಯನೆಂಬ ಶಿವಶರಣನ ಮುಖದಲ್ಲಿ ಮೋಳಿಗಯ್ಯ ಮೊದಲಾದ ಸಕಲಪ್ರಮಥರ್ಗೆ ಬೋಧಿಸಿದರು ನೋಡ. ಅದೇ ಪ್ರಸಾದವನ್ನೆ ನಿರ್ಲಜ್ಜಶಾಂತಯ್ಯನೆಂಬ ದೇಶಿಕೇಂದ್ರನು ಚಂಗಣಗಿಲಮಂಟಪದ ರೇವಣಸಿದ್ದೇಶ್ವರಂಗೆ ಬೋಧಿಸಿದರು ನೋಡ. ಅದೇ ಪ್ರಸಾದವನ್ನೆ ರೇವಣಸಿದ್ದೇಶ್ವರನೆಂಬ ದೇಶಿಕೇಂದ್ರನು ಜ್ಞಾನೋದಯರಾಗಿ ತಮ್ಮಡಿಗೆರಗಿ ಬಂದ ಶಿಷ್ಯೋತ್ತಮ ಶಿವಶರಣರ್ಗೆ ಸ್ವಾನುಭಾವಸೂತ್ರವ ಬೋಧಿಸುತ್ತಿರ್ದರು ನೋಡ. ಅದೇ ಮಹಾಪ್ರಸಾದವ ನಿನ್ನ ಶ್ರೋತ್ರಮುಖದಲ್ಲಿ ಮಹಾಮಂತ್ರಮೂರ್ತಿಯಾಗಿ ನೆಲೆಗೊಂಡಿರ್ಪ ಪ್ರಸಾದಲಿಂಗಮುಖದಲ್ಲಿ ಅರುಹಿಸಿ ಕೊಟ್ಟೇವು ಕೇಳಿ, ಮಹಾಲಿಂಗಮುಖದಲ್ಲಿ ಸಂತೃಪ್ತನಾಗಿ, ಪರಿಣಾಮಪ್ರಸಾದದಲ್ಲಿ ಲೋಲುಪ್ತನಾಗಿ, ಎನ್ನ ಜ್ಞಾನಮಂಟಪದಲ್ಲಿ ಮೂರ್ತಿಗೊಂಡಿರುವ ಸಂಗನಬಸವೇಶ್ವರ.