Index   ವಚನ - 48    Search  
 
ಅಯ್ಯ, ಪ್ರಥಮದಲ್ಲಿ ಇಪ್ಪತ್ತೊಂದು ತೆರದ ದೀಕ್ಷೆಯ ಕರುಣಿಸೇವು ನೋಡ. ಅದರ ವಿಚಾರವೆಂತೆಂದಡೆ : ಅಷ್ಟತನು, ಅಷ್ಟಭೋಗಂಗಳ ಅಭಿಲಾಷೆಯ ನೀಗಿ, ಸರ್ವಸಂಗ ಪರಿತ್ಯಾಗತ್ವದಿಂದ ನಿಜನೈಷ್ಠೆ ಕರಿಗೊಂಡು ಸಚ್ಚಿದಾನಂದದಿಂದ ನಿಂದ ನಿಜೋತ್ತಮಂಗೆ ಶ್ರೀಗುರುಲಿಂಗಜಂಗಮವು ಕೃಪಾದೃಷ್ಟಿಯಿಂದ ನೋಡಿ ಜನ್ಮ-ಜರೆ-ಮರಣಂಗಳಿಗಂಜಬೇಡವೆಂದು ಅಂಗ ಮನ ಪ್ರಾಣಂಗಳ ಮೇಲೆ ಅಭಯಹಸ್ತವಿತ್ತು, ಸಂಸಾರಪ್ರಪಂಚಿಗೊಳಗಾದ ಪಂಚಮಹಾಪಾತಕರಂತೆ ನಡೆಯಬೇಡವೆಂದು ಪಾದಕ್ಕೆ ಆಜ್ಞೆಯ ಮಾಡಿದರಯ್ಯ. ಜಡಮರ್ತ್ಯರು ನುಡಿದಂತೆ, ನುಡಿಯಬೇಡವೆಂದು ವಾಣಿಗೆ ಆಜ್ಞೆಯ ಮಾಡಿದರಯ್ಯ. ಪರದೈವ-ಪರದ್ರವ್ಯ-ಪರಸ್ತ್ರೀಯರ-ಮುಟ್ಟಬೇಡವೆಂದು ಪಾಣಿಗೆ ಆಜ್ಞೆಯ ಮಾಡಿದರಯ್ಯ. ಯೋನಿದ್ವಾರವ ಹೊಕ್ಕಡೆ ಅದರಲ್ಲಿ ಜನಿತ ತಪ್ಪದೆಂದು ಅದರಿಂದ ಬಿಟ್ಟು ಹುಳುಗೊಂಡವಿಲ್ಲವೆಂದು ಮಾಣಿಗೆ ಆಜ್ಞೆಯ ಮಾಡಿದರಯ್ಯ. ಇಂತು ಭವಿಮಾರ್ಗವನುಳಿದು ಸತ್ಯನಡೆ, ಸತ್ಯನುಡಿ, ಸತ್ಯಪಾಣಿ, ಸತ್ಯಮಾಣಿಯಾದಡೆ ನಿನ್ನ ಪಾದ ಮೊದಲಾಗಿ ಮಾಣಿಯ ಅಂತ್ಯವಾದ ಸರ್ವಾಂಗದಲ್ಲಿ ಚತುರ್ವಿಧ ಸಾರಾಯಸ್ವರೂಪ ಗುರುಲಿಂಗಜಂಗಮಪ್ರಸಾದವಾಗಿ ಕ್ಷೀರದೊಳಗೆ ಘೃತವಡಗಿದಂತೆ ಏಕಸ್ವರೂಪಿನಿಂದ ನಿಮಿಷಾರ್ಧವಗಲದೆ ನಿಜವಸ್ತು ಬೆರದಿರ್ಪುದು ನೋಡ. ಎಂದು ಅನುಭಾವಮಂಟಪದಲ್ಲಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಗಣಸಾಕ್ಷಿಯಾಗಿ ಆಜ್ಞೋಪದೀಕ್ಷೆಯ ಮಾಡಿದರು ಸಂಗನಬಸವೇಶ್ವರ