Index   ವಚನ - 49    Search  
 
ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ ಅಷ್ಟಾವರಣಸ್ವರೂಪಿನಿಂದ ನೆರದಿರ್ಪುದು ನೋಡ. ಅದರ ವಿಚಾರವೆಂತೆಂದಡೆ : ನಿನ್ನ ಸ್ಥೂಲತನುವಿನ ಮಧ್ಯದಲ್ಲಿ ಅರುಹೆ ಗುರುವಾಗಿ ನೆಲಸಿರ್ಪರು ನೋಡ. ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ. ನಿನ್ನ ಕಾರಣತನುವಿನ ಮಧ್ಯದಲ್ಲಿ ಸ್ವಾನುಭಾವಜಂಗಮವಾಗಿ ನೆಲಸಿರ್ಪರು ನೋಡ. ನಿನ್ನ ನಿರ್ಮಲತನುವಿನ ಮಧ್ಯದಲ್ಲಿ ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ. ನಿನ್ನ ಆನಂದತನುವಿನ ಮಧ್ಯದಲ್ಲಿ ಕೃಪಾಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ ಚಿತ್ಪ್ರಕಾಶಭಸಿತವಾಗಿ ನೆಲಸಿರ್ಪರು ನೋಡ. ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ. ನಿನ್ನ ಚಿತ್ಪ್ರಕಾಶತನುವಿನ ಮಧ್ಯದಲ್ಲಿ ಚಿದಾನಂದಮಂತ್ರವಾಗಿ ನೆಲಸಿರ್ಪರು ನೋಡ. ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿನಿಂದ ಪರಾತ್ಪರ ನಿಜವಸ್ತು ನೆರದಿರ್ಪುದು ನೋಡ. ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ ನಿನ್ನ ನೀ ತಿಳಿದು ನೋಡ. ಎಂದು ಗಣಸಾಕ್ಷಿಯಾಗಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಉಪಮಾದೀಕ್ಷೆ ಇಂತುಂಟೆಂದು ನಿರೂಪಂ ಕೊಡುತ್ತಿರ್ದರು ನೋಡ ಸಂಗನಬಸವೇಶ್ವರ.