Index   ವಚನ - 51    Search  
 
ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನವ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚಕಲಶಂಗಳಲ್ಲಿ ಶೋಭಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತೆಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘ್ಯೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಆ ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಭಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ