Index   ವಚನ - 52    Search  
 
ಅಯ್ಯ, ಶ್ರೀಗುರುದೇವನು ಪ್ರಮಥಗಣಾರಾಧ್ಯ ಭಕ್ತಮಹೇಶ್ವರರರೊಡಗೂಡಿ ಪಂಚಾಭಿಷೇಕ ಮೊದಲಾಗಿ ಪಾದೋದಕವೆ ಕಡೆಯಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರದಿಂದ ಇಷ್ಟಲಿಂಗದೇವಂಗೆ ಸಪ್ತವಿಧಾರ್ಚನೆಯಮಾಡಿ, ತಮ್ಮ ಕುಮಾರಮೂರ್ತಿಯೆಂದು ಮಹಾಸಂತೋಷದಿಂದ ತೊಡೆಯ ಮೇಲೆ ಮುಹೂರ್ತ ಮಾಡಿಸಿಕೊಂಡು, ಆಮೇಲೆ ಪ್ರಾಣಲಿಂಗಸ್ವರೂಪವಾದ ಉಭಯ ಹಸ್ತವನ್ನು ಸಪ್ತವಿಧಾರ್ಚನೆಯ ಮಾಡಿ, ದಶಾಂಗುಲಮಧ್ಯದಲ್ಲಿ ದ್ವಾದಶಮೂಲಪ್ರಣಮವ ಲಿಖಿಸಿ, ಕುಮಾರಠಾವ ಮಾಡಿ, ಆಮೇಲೆ ಭಾವಲಿಂಗಸ್ವರೂಪ ಗೋಳಕಸ್ಥಾನವಾದ ಮಸ್ತಕವನ್ನು ಸಪ್ತವಿಧಾರ್ಚನೆಯ ಮಾಡಿ, ದ್ವಾದಶ ಮಹಾಪ್ರಣವ ಲಿಖಿಸಿ, ಸರ್ವಾಂಗದಲ್ಲಿ ಕ್ರಿಯಾಪಾದೋದಕಸ್ವರೂಪವಾದ ಚಿದ್ಭಸಿತವ ಮಹಾಮಂತ್ರಸ್ಮರಣೆಯಿಂದ ಸ್ನಾನ-ಧೂಳನ-ಧಾರಣವ ಮಾಡಿ, ಲಲಾಟದಲ್ಲಿ ಅನಾದಿಪರಶಿವಲಿಖಿತವ ಲಿಖಿಸಿ, ಸರ್ವಾಚಾರಸಂಪನ್ನನಾಗೆಂದು ಆಶೀರ್ವಚನವ ನೀಡುವಂಥಾದೆ ವಿಭೂತಿಪಟ್ಟದೀಕ್ಷೆ ! ಇಂತುಟೆಂದು ಶ್ರೀಗುರುನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ