Index   ವಚನ - 53    Search  
 
ಅಯ್ಯ, ವರವೀರಶೈವ ಷಟ್ಸ್ಥಲಾಚಾರ್ಯ- ಘನಲಿಂಗಚಕ್ರವರ್ತಿಯಪ್ಪ ಶ್ರೀ ಗುರುಲಿಂಗದೇವನು ತನ್ನ ತೊಡೆಯಮೇಲೆ ಮೂರ್ತಿಗೊಂಡಿರುವ ಕುಮಾರ ಇಷ್ಟಲಿಂಗದೇವಂಗೆ ಪ್ರಾಣಲಿಂಗ-ಭಾವಲಿಂಗ ಸ್ವರೂಪವಾದ ಶರಣನ ಚಿದಂಗವೆ ನಿನಗೆ ನಿಜಮೋಕ್ಷಮಂದಿರವೆಂದು ಅರುಹಿದ ಮೇಲೆ ನಿಮಿಷಾರ್ಧವಗಲಿರದೆ ನಮ್ಮ ಪ್ರಮಥಗಣಾಚಾರಕ್ಕೆ ಹೊರಗುಮಾಡಿ, ಭವಕ್ಕೆ ನೂಂಕೇವೆಂದು ಪ್ರತಿಜ್ಞೆಯನಿಟ್ಟು, ಆ ಶರಣನ ಕರಸ್ಥಲಕ್ಕೆ ಪ್ರಾಣಕಳಾಚೈತನ್ಯಮೂರ್ತಿಲಿಂಗದೇವನ ಮುಹೂರ್ತವ ಮಾಡಿಸಿ, ಆ ಲಿಂಗದೇವಂಗೆ ಪ್ರಮಥಗಣಾರಾಧ್ಯ- ಭಕ್ತಮಹೇಶ್ವರರೆಲ್ಲ ಅಭಯಹಸ್ತವಿತ್ತು, ಆಮೇಲೆ ಚಿದಂಗಸ್ವರೂಪವಾದ ಶರಣಂಗೆ ಈ ಲಿಂಗದೇವನ ನಿಮಿಷಾರ್ಧವಗಲಿರದೆ ನಿನಗೂ ಅದೇ ಪ್ರತಿಜ್ಞೆ ಬಂದೀತೆಂದು ಆಜ್ಞಾಪನವ ಮಾಡಿ, ಹೃದಯಕಮಲಮಧ್ಯದಲ್ಲಾಡುವ ಸಹಸ್ರಹೆಡೆಯ ಕುಂಡಲೀಸರ್ಪಂಗೆ ಮುಸುಕಿರುವ ಅಜ್ಞಾನ ಮಾಯಾಮರವೆಯನ್ನು ಅನಾಹತದ್ವಾರದಿಂದ ಅನಾದಿಮೂಲಮಂತ್ರವನ್ನು ಉಸುರಿ ಕುಂಡಲೀಸರ್ಪನ ಹೆಡೆಯ ಎತ್ತಿಸಿ, ಚಿದಗ್ನಿಯ ಪುಟವ ಮಾಡುವಂಥಾದೆ ಲಿಂಗಾಯತದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.