Index   ವಚನ - 64    Search  
 
ಅಯ್ಯ, ಶರಣಸತಿ-ಲಿಂಗಪತಿ ಭಾವದಿಂದ ಸುಚಿತ್ತ, ಸುಬುದ್ಧಿ, ನಿರಹಂಕಾರ, ಸುಮನ, ಸುಜ್ಞಾನ, ಸದ್ಭಾವ, ನಿರುಪಾಧಿಕ, ನಿಷ್ಕಳಂಕ, ನಿರಾಳವೆಂಬ ನವವಿಧ ಹಸ್ತಗಳಿಂದ ನವವಿಧ ಪದಾರ್ಥವನ್ನು ಇಷ್ಟಲಿಂಗ-ಪ್ರಾಣಲಿಂಗ-ಭಾವಲಿಂಗ- ಆಚಾರಲಿಂಗ-ಗುರುಲಿಂಗ-ಶಿವಲಿಂಗ-ಜಂಗಮಲಿಂಗ ಪ್ರಸಾದಲಿಂಗ-ಮಹಾಲಿಂಗವೆಂಬ ನವವಿಧಲಿಂಗಗಳಿಗೆ ಶ್ರದ್ಧಾಭಕ್ತಿ ಮೊದಲಾಗಿ ನವವಿಧ ಭಕ್ತಿಗಳಿಂದ ಸಮರ್ಪಿಸುವ ಕ್ರಮವೆಂತೆಂದಡೆ : ತನುಸಂಬಂಧವಾದ ರೂಪುಪದಾರ್ಥವನ್ನು ಇಷ್ಟಲಿಂಗಕ್ಕೆ ಸಮರ್ಪಿಸಿ, ಮನಸಂಬಂಧವಾದ ರುಚಿಪದಾರ್ಥವನ್ನು ಪ್ರಾಣಲಿಂಗಕ್ಕೆ ಸಮರ್ಪಿಸಿ, ಧನಸಂಬಂಧವಾದ ತೃಪ್ತಿ ಪದಾರ್ಥವನ್ನು ಭಾವಲಿಂಗಕ್ಕೆ ಸಮರ್ಪಿಸಿ, ಸುಗಂಧಪದಾರ್ಥವನ್ನು ಆಚಾರಲಿಂಗಕ್ಕೆ ಸಮರ್ಪಿಸಿ, ಸುರಸಪದಾರ್ಥವನ್ನು ಗುರುಲಿಂಗಕ್ಕೆ ಸಮರ್ಪಿಸಿ, ಸುರೂಪುಪದಾರ್ಥವನ್ನು ಶಿವಲಿಂಗಕ್ಕೆ ಸಮರ್ಪಿಸಿ, ಸ್ಪರ್ಶನಪದಾರ್ಥವನ್ನು ಜಂಗಮಲಿಂಗಕ್ಕೆ ಸಮರ್ಪಿಸಿ, ಸುಶಬ್ದಪದಾರ್ಥವನ್ನು ಪ್ರಸಾದಲಿಂಗಕ್ಕೆ ಸಮರ್ಪಿಸಿ, ಸುತೃಪ್ತಿಪದಾರ್ಥವನ್ನು ಮಹಾಲಿಂಗಕ್ಕೆ ಸಮರ್ಪಿಸಿ, ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶ್ರೋತ್ರ, ಹೃದಯಂಗಳು ಮೊದಲಾದ ಸಮಸ್ತ ಮುಖಂಗಳಲ್ಲಿ ಬರುವ ಪದಾರ್ಥಂಗಳ ಸಮಸ್ತಲಿಂಗಂಗಳಿಗೆ ಮಿಶ್ರಾಮಿಶ್ರಂಗಳೊಡನೆ ಸಮರ್ಪಿಸಿ, ಆ ಲಿಂಗಂಗಳ ಸಂತೃಪ್ತಿ ಪರಿಣಾಮಪ್ರಸಾದದಲ್ಲಿ ಲೋಲುಪ್ತವಾಗಿರುವಂಥಾದೆ ಪಂಚೇಂದ್ರಿಯಾರ್ಪಿತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಷ್ಪ್ರಪಂಚ ನಿರಾಲಂಬ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.