Index   ವಚನ - 65    Search  
 
ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಉತ್ಪತ್ಯವಾಗಿ ನಿರ್ಮಾಯಕಂಥೆಯ ಧರಿಸಿದ ಶಿವಶರಣಂಗೆ ಅನಂತ ಲೀಲೆಯಲ್ಲಿ ಬೆಂಬತ್ತಿ ಬಂದ ಮಹಾಪಾಪವೆ ಒಂದುರೂಪಾಗಿ, ಮಾಯಾಜಡಜೀವಿಶರೀರವ ಧರಿಸಿ ಪರಿಪರಿಯಿಂದ ನಿಂದ್ಯ ಕುಂದು ಅಪಮೃತ್ಯುಗಳು ಬಂದು ತಟ್ಟಿದಲ್ಲಿ ಅರ್ಪಿತಾವಧಾನ ಸುಖದುಃಖಂಗಳು ಬಂದು ಸೋಂಕಲೊಡನೆ ಶಿವಶರಣನು ತನ್ನ ಸ್ವಾತ್ಮ ಜ್ಞಾನದಿಂದರಿದು ನೋಡಿದಲ್ಲಿ ಈ ಮಾಯಾಜಡಜೀವಾತ್ಮರಿಗೆ ಸೂತ್ರಧಾರಿ ಶಿವನು ಕಪಟನಾಟಕ ಲೀಲೆಯ ಧರಿಸಿ ಸಕಲಜೀವಾತ್ಮರ ಮಧ್ಯದಲ್ಲಿ ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ, ಆ ಜೀವನೆಂಬ ವಿಧಿಗೆ ಸ್ತುತಿ-ನಿಂದ್ಯ, ಪುಣ್ಯ, ಪಾಪ, ಸಂಕಲ್ಪ-ವಿಕಲ್ಪವೆಂಬ ಕುಟಿಲವ್ಯವಹಾರವ ಕಲ್ಪಿಸಿ, ಆ ಜೀವನಿಂದ ಭಕ್ತಗಣಂಗಳಲ್ಲಿ ಅಷ್ಟಾವರಣದ ನಿಷ್ಠಾಪರತ್ವವ ನೋಡಬೇಕೆಂದು ಅನಂತ ಬಾಧೆಗಳಿಂದ ಬಾಧಿಸಿದಲ್ಲಿ ಶಿವಶರಣಗಣಂಗಳು ಆ ಬಾಧೆಗೆ ಅಳುಕದೆ ಚಿಂತಿಸದೆ ಅಷ್ಟಾವರಣಭರಿತರಾಗಿ ದೇಹಾಭಿಮಾನದ ಹಸಿವು, ತೃಷೆ, ನಿದ್ರೆ, ಆಲಸ್ಯ, ಕುಸಂಗವೆಂಬ ಕಾಲ-ಕಾಮರ ಪಾಶದಲ್ಲಿ ಬೀಳದೆ, ಭವಿ ಭಕ್ತನೆಂಬ ವಿಚಾರವನರಿಯದ ದುಷ್ಟರ ಕಂಡರೆ ದೂರದಲ್ಲಿರಬೇಕೆಂಬ ಗುರುವಾಕ್ಯವ ತಿಳಿದು ಅವರ ಸಂಭಾಷಣೆ-ಸಂಸರ್ಗವಮಾಡದೆ ಅವರ ಸ್ತುತಿ ನಿಂದ್ಯಾದಿಗಳನಾಲಿಸದೆ, ನಿಷ್ಕಳಂಕ ಪರಬ್ರಹ್ಮ ಪರಶಿವಲಿಂಗದಲ್ಲಿ ಸದಾಚಾರಿ-ಸನ್ಮಾರ್ಗಿ-ಸುಸಂಗಿಗಳಿಂದ ಶ್ರದ್ಧಾತುರ ಪರಿಣಾಮದಲ್ಲಿ ಬಂದು ತಟ್ಟಿದ ಪರಿಣಾಮ ಪಾದೋದಕ ಪ್ರಸಾದದಲ್ಲಿ ಲೋಲುಪ್ತರಾಗಿ, ತಮ್ಮ ನಡೆನುಡಿಗಳ ಸ್ವಾತ್ಮಜ್ಞಾನದಿಂದ ವಿಚಾರಿಸಿ, ಪಕ್ವವ ಮಾಡುವಂಥ ನಿಂದ ನಿಲುಕಡೆಯ ಅಹಿಂಸೆದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಸಚ್ಚಿದಾನಂದಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.