Index   ವಚನ - 66    Search  
 
ಅಯ್ಯ, ಸತ್ತುಚಿತ್ತಾನಂದ ನಿತ್ಯ ಪರಿಪೂರ್ಣ ಅವಿರಳ ಪರಂಜ್ಯೋತಿ ಸ್ವರೂಪ ಪರಮಾರಾಧ್ಯ ವೀರಶೈವಾಚಾರ ಷಟ್ಸ್ಥಲ ಪ್ರತಿಪಾದಕ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಅಂಗ-ಮನ-ಭಾವಗಳೆಲ್ಲ ಶುದ್ಧಸಿದ್ಧಪ್ರಸಿದ್ಧಪ್ರಸಾದದ ಸ್ವರೂಪವಾದ ಇಷ್ಟ ಪ್ರಾಣ ಭಾವಲಿಂಗವಾದ ಮೇಲೆ ಭೃಂಗ ಕೀಡಿಯೋಪಾದಿಯಲ್ಲಿ ಗುರುಲಿಂಗಜಂಗಮ ಬೇರೆ, ನಾ ಬೇರೆಂಬ ಭಿನ್ನಭೇದವನಳಿದು ಗುರುಮಾರ್ಗಾಚಾರದಲ್ಲಿ ಪ್ರೇಮವುಳ್ಳಾತನಾಗಿ ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಷ್ಟಾಂಗಯೋಗಭ್ರಮಿತರ ಜಡಕರ್ಮ ಶೈವಮಾರ್ಗದಲ್ಲಿ ಸಾಕ್ಷಾತ್ ಶಿವನೆ ಇಷ್ಟಲಿಂಗಧಾರಕನಾಗಿ, ಗುರುರೂಪ ಧರಿಸಿ, ಶಿವಭಕ್ತಮಾರ್ಗವ ತೋರದೆ ಇಚ್ಛೆಯ ನುಡಿದು, ಉದರವ ಹೊರೆವ ವೇಷವ ಕಂಡು, ಶರಣೆಂದು ಮನ್ನಣೆಯ ಕೊಡದೆ, ಭೂತಸೋಂಕಿದ ಮನುಜನೋಪಾದಿಯಲ್ಲಿ ತನ್ನ ಪವಿತ್ರ ಸ್ವರೂಪ ಪರತತ್ವಮೂರ್ತಿಧ್ಯಾನದಿಂದ ಚಿದ್ಘನಲಿಂಗದೊಳಗೆ ತಾನಾಗಿ, ತನ್ನೊಳಗೆ ಚಿದ್ಘನಲಿಂಗವಾಗಿ, ಸಪ್ತಧಾತು, ಸಪ್ತವ್ಯಸನಂಗಳಲ್ಲಿ ಕೂಡದೆ ಲಿಂಗವೆ ತಾನಾದ ಸ್ವಸ್ವರೂಪು ನಿಲುಕಡೆಯ ಲಿಂಗನಿಷ್ಠೆದೀಕ್ಷೆ. ಇಂತುಟೆಂದು ಶ್ರೀಗುರುಲಿಂಗಜಂಗಮಸ್ವರೂಪ ನಿಷ್ಕಳಂಕಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.