Index   ವಚನ - 88    Search  
 
ಅಯ್ಯ, ಅರ್ಧಚಂದ್ರಾಕೃತಿ, ವಕಾರಪ್ರಣಮ, ಮೇಘನಾದ, ಅನಾಹತಚಕ್ರ, ಮಾಂಜಿಷ್ಠವರ್ಣ, ಪ್ರಾಣಲಿಂಗಿಸ್ಥಲ, ನಿರ್ಮಲತನು, ಸುಮನಹಸ್ತ, ಜಂಗಮಲಿಂಗ, ತ್ವಕ್ಕೆಂಬ ಮುಖ, ಅನುಭಾವಭಕ್ತಿ, ಸುಸ್ಪರ್ಶನ ಪದಾರ್ಥ, ಸುಸ್ಪರ್ಶನ ಪ್ರಸಾದ, ಈಶ್ವರ ಪೂಜಾರಿ, ಈಶ್ವರನಧಿದೇವತೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ನಿರ್ಮಲಾತ್ಮ, ಆದಿಶಕ್ತಿ, ಶಾಂತಿಕಲೆ-ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು, ಎನ್ನ ಅನಾಹತಚಕ್ರವೆಂಬ ಹಿಮವತ್ಕೇತಾರಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಯಜನಸ್ವರೂಪವಾದ ಜಂಗಮಲಿಂಗವೆ ಹಿಮಗಿರೀಶ್ವರಲಿಂಗವೆಂದು, ಪ್ರಾಣತ್ರಯವ ಮಡಿಮಾಡಿ, ಶಾಂತಿಯೆಂಬ ಜಲದಿಂ ಮಜ್ಜನಕ್ಕೆರದು, ವಾಯು ನಿವೃತ್ತಿಯಾದ ಗಂಧವ ಧರಿಸಿ, ಮನ ಸುಮನವಾದಕ್ಷತೆಯನಿಟ್ಟು ಅಲ್ಲಿಹ ದ್ವಾದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಾಂಜಿಷ್ಠವರ್ಣವೆ ಕರ್ಪೂರದ ಜ್ಯೋತಿಯೆಂದು, ಬೆಳಗಿ, ಅಲ್ಲಿಹ ತೂರ್ಯಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೇಪವೆಂಬಾಭರಣವ ತೊಡಿಸಿ, ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ, ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಜಂಗಮಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ಜಂಗಮಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಾಕಾರಷಡ್ವಿಧ ಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಮಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಃಪ್ರಪಂಚಿಯಾಗಿ ಆಚರಿಸಬಲ್ಲಾತನೆ ಅನುಭಾವಭಕ್ತಿಯನುಳ್ಳ ಲಿಂಗಪ್ರಾಣಿ ನೋಡ ಸಂಗನಬಸವೇಶ್ವರ.