Index   ವಚನ - 89    Search  
 
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ, ವಿಶುದ್ಧಿಚಕ್ರ, ಕಪೋತವರ್ಣ, ಶರಣಸ್ಥಲ, ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದಭಕ್ತಿ, ಸುಶಬ್ದಪದಾರ್ಥ, ಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ, ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ, ಊರ್ಧ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ, ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ- ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು, ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದಕ್ಷತೆಯನಿಟ್ಟು, ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಮದವೆಂಬಾಭರಣವ ತೊಡಿಸಿ, ಸುಶಬ್ಧವೆಂಬ ನೈವೇದ್ಯವನರ್ಪಿಸಿ, ಆನಂದವೆಂಬ ತಾಂಬೂಲವನಿತ್ತು, ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರ ಷಡ್ವಿಧ ಮಂತ್ರಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ ಸಂಗನಬಸವೇಶ್ವರ.