Index   ವಚನ - 14    Search  
 
ಆದಿ ಅನಾದಿಗಳಿಲ್ಲದಂದು, ಸುರಾಳ ನಿರಾಳಗಳಿಲ್ಲದಂದು, ಶೂನ್ಯ ನಿಃಶೂನ್ಯಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ನಾಮರೂಪಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಪರಂಪರ ನಿಷ್ಕಲಲಿಂಗ ತಾನೇ ನೋಡಾ! ಆ ಲಿಂಗದ ಚಿದ್ವಿಲಾಸದಿಂದ ಉದಯವಾದ ಜಂಗಮಕ್ಕೆ ಆದಿ ಅನಾದಿಯೆ ಹಾವುಗೆ, ಶುದ್ಧ ಸಿದ್ಧವೆ ಪಾದದ ಜಂಗು, ಪ್ರಸಿದ್ಧವೆ ಗಮನ, ಮನೋಹರವೆ ಕಟಿ, ಸದಾಸನ್ನಹಿತವೆ ಕೌಪ, ನಿಶ್ಚಿಂತವೆ ಯೋಗವಟ್ಟಿಗೆ, ನಿರಾಕುಳವೆ ಜೋಳಿಗೆ, ನಿರ್ಭರಿತವೆ ದಂಡಕೋಲು, ಅಖಿಳಕೋಟಿ ಬ್ರಹ್ಮಾಂಡವೆ ಬಟ್ಟಲು, ಪರಮಶಾಂತಿಯೆ ವಿಭೂತಿ, ನಿರಂಜನವೇ ರುದ್ರಾಕ್ಷಿ, ಸುರಾಳ ನಿರಾಳವೆ ಕರ್ಣಕುಂಡಲ, ನಿಃಶೂನ್ಯವೆ ಕರಪಾತ್ರೆ, ನಿರಪೇಕ್ಷವೇ ಭಿಕ್ಷ, ನಿರವಯವೆಂಬ ಮಠದಲ್ಲಿ ನಟಿಸಿಪ್ಪ ಜಂಗಮಕೆ ಓಂ ನಮಃ ಓಂ ನಮಃ ಓಂ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.