ಕಾಯವಿಲ್ಲದ ಹಂಸನು ಗೂಡನಿಕ್ಕುವದ ಕಂಡೆನಯ್ಯ.
ಅದು ಹೇಗೆಂದಡೆ:
ಅದಕ್ಕೆ ಬುಡ ಒಂದು, ಕೊನೆ ಮೂರು,
ಆರು ಕಡ್ಡಿಯ ಹೂಡಿ, ನಾದಬ್ರಹ್ಮವೆಂಬ ಕಟ್ಟ ಕಟ್ಟಿ,
ಒಂಬತ್ತು ಯಜ್ಞದ ಗೂಡಿನೊಳಗೆ ಇಪ್ಪ ಹಂಸನ
ಒಬ್ಬ ಸತಿಯಳು ಕಂಡು ಬೇಂಟೆಗಾರಂಗೆ ಹೇಳಲೊಡನೆ,
ಆ ಬೇಂಟೆಕಾರ ಗದೆಯ ತಕ್ಕೊಂಡು ಇಡಲೊಡನೆ,
ಸ್ವರ್ಗ ಮರ್ತ್ಯ ಪಾತಾಳವನೊಡೆದು
ಆಕಾಶ ನಿರಾಕಾಶವೆಂಬ ನಿರ್ಬಯಲಲ್ಲಿ ಬಿತ್ತು ನೋಡಾ!
ಆ ಬೇಂಟೆಕಾರ, ಆ ಗುರಿಯನೆತ್ತಲು
ಆ ಕಾಯವಿಲ್ಲದ ಹಂಸ ಆ ಗದೆಯ ಕಚ್ಚಿತ್ತು ನೋಡಾ!
ಇದೇನು ವಿಚಿತ್ರವೆಂದು ಬೆರಗಾಗುತಿರ್ದನಯ್ಯ
ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.