ಆದಿಯಲ್ಲಿ ಒಬ್ಬ ಶಿವಶರಣನು
ಮನೆಯ ಕಟ್ಟಿಸಲಿಕ್ಕೆ ಅನುವಂಗೈದನಯ್ಯ.
ಅದು ಹೇಗೆಂದಡೆ:
ಒಂದಾಮೋದವ ಮಾಡಿ,
ಮೂವತ್ತಾರು ಕಂಬಗಳ ಮಾಡಿ,
ಐವತ್ತೆರಡು ತೊಲೆ ಜಂತಿಗಳ ಹಮ್ಮಿ,
ಇಪ್ಪತ್ತೈದು ಬೋದಂಗಳ ಭೇದಿಸಿ,
ಸಾಪಾಯವೆಂಬ ಮೇಲುಮುದ್ದಿಯ ಹಾಕಿ,
ಮನೆಯ ಕಟ್ಟಿದನಯ್ಯ ನಮ್ಮ ಶಿವಶರಣನು.
ಆ ಮನೆಯು ನಾ ಘನವೆಂದರೆ ನನ್ನ ನುಂಗಿತ್ತು,
ನೀ ಘನವೆಂದರೆ ನಿನ್ನ ನುಂಗಿತ್ತು
ನಾನು ನೀನೆಂಬ ಕೊನೆಕೋಣೆಯಲ್ಲಿ ತಾನೇ ನೋಡಾ !
ತನ್ನೊಡನೆ ಒಬ್ಬ ಭಾಮಿನಿಯು ಹುಟ್ಟಿದಳು.
ಐದಗಲ ಮಾಡಿ ತಂದು,
ಪೃಥ್ವಿಗೆ ಒಂದು ಸಂಬಂಧಿಸಿ,
ಅಪ್ಪುವಿಂಗೆ ಒಂದು ಸಂಬಂಧಿಸಿ,
ತೇಜಕ್ಕೆ ಒಂದು ಸಂಬಂಧಿಸಿ,
ವಾಯುವಿಂಗೆ ಒಂದು ಸಂಬಂಧಿಸಿ,
ಆಕಾಶಕ್ಕೆ ಒಂದು ಸಂಬಂಧಿಸಿ,
ಈ ಐದಗಲ ಬಿಟ್ಟು ನೀಡಿದ
ಭಾಮಿನಿಯ ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.